ನೀರಿನ ಅಭಾವ: ಜನತೆ ಹೈರಾಣ
ಶಿರಹಟ್ಟಿ,ಜೂ.20: ತಾಲೂಕಿನ ಕಡಕೋಳ ಗ್ರಾಮದಲ್ಲಿ ಸುಮಾರು ಒಂದೂವರೆ ತಿಂಗಳುಗಳಿಂದ ಡಿಬಿಒಟಿಯಿಂದ ಸರಬರಾಜು ಆಗುತ್ತಿದ್ದ ಹೊಳೆ ನೀರು ಸ್ಥಗಿತವಾಗಿದ್ದು, ಕಡಕೋಳ, ಕುಸಲಾಪೂರ, ಜಲ್ಲಿಗೇರಿ, ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು ಕುಡಿಯುಲು ನೀರು ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಕೈ ಬೋರಗಳು ಇಲ್ಲದೇ ಇರುವುದರಿಂದ ದೂರದ ಬೋರ್‍ವೇಲ್‍ಗಳಿಂದ ಟ್ಯಾಂಕಗೆ ನೀರು ಪೂರೈಸಿ ಗ್ರಾಮಕ್ಕೆ ನೀರು ಒದಗಿಸಲಾಗುತ್ತಿದೆ ಎಂದು ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮ ಪಂಚಾಯತ ಅಧ್ಯಕ್ಷೆ ಹೇಮಾ ಶರಣಪ್ಪ ಹರ್ಲಾಪೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖಂಡ ಶರಣ ಹರ್ಲಾಪೂರ ಮಾತನಾಡಿ, ಕಡಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಕುರಿತು ನೀರು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹಿತವಾಗಿ ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ ಎಂದಿದ್ದಾರೆ.
ಗ್ರಾಮ ಪಂಚಾಯಿತಿಗೆ ಬಂದಂತಹ ಅನುದಾನದಲ್ಲಿ ಕೈ ಬೋರ ಹಾಗೂ ಬೋರವೆಲ್‍ಗಳನ್ನು ನಾವು ಸರಿಯಾಗಿ ಇಟ್ಟುಕೊಂಡಿದ್ದೇವೆ ಅದರಲ್ಲಿ ಯಾವೂದೇ ತೊಂದರೆ ಇಲ್ಲ. ಆದರೆ ಅದರಲ್ಲಿ ಸಿಗುವ ನೀರು ಕೂಡಾ ನಮ್ಮ ಗ್ರಾಮಕ್ಕೆ ಸಮಪರ್ಕವಾಗಿ ಸಾಕಾಗುತ್ತಿಲ್ಲ.
ಡಿಬಿಒಟಿ ಯೋಜನೆ ಹಳ್ಳ ಹಿಡಿಯುತ್ತಿರುವ ಆತಂಕ : ಡಿಬಿಒಟಿ ಯೋಜನೆಯಿಂದ ಶಿರಹಟ್ಟಿ ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ. ಸರಕಾರದ ಹಿತಾಸಕ್ತಿಯಿಂದ ರೂಪಿತವಾಗಿರುವ ಯೋಜನೆ ಕೆಲವೇ ದಿನಗಳಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಳ್ಳ ಹಿಡಿಯುತ್ತಿರುವುದು ಇದನ್ನೇ ನಂಬಿದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದ್ದಾರೆ.