ಅತೀವೃಷ್ಟಿಯಿಂದಾದ ಹಾನಿ: ಸಭೆ
ಗದಗ,ಜೂ20: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಪ್ರಸಕ್ತ ಸಾಲಿನ ಅತೀವೃಷ್ಟಿಯಿಂದಾದ ಹಾನಿಯ ಕುರಿತು ಸಭೆ ಜರುಗಿತು.
ಅಧಿಕ ಮಳೆಯಿಂದಾಗುವ ಅತೀವೃಷ್ಟಿ ನಿಯಂತ್ರಣಕ್ಕೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನಜಾನುವಾರುಗಳ ಜೀವಹಾನಿ ತಡೆಗೆ ಮುಂದಾಗಬೇಕು ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿ ತಪ್ಪಿಸಲು ಅಗತ್ಯದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.
ಅತೀವೃಷ್ಟಿಯಿಂದ ಪ್ರವಾಹ ಉಂಟಾಗಬಹುದಾದ ಜಿಲ್ಲೆಯ 11 ಗ್ರಾಮಗಳು ಹಾಗೂ ನಗರ ಪ್ರದೇಶದ 14 ವಾರ್ಡಗಳನ್ನು ಗುರುತಿಸಲಾಗಿದೆ. ಅಧಿಕ ಪ್ರಮಾಣದ ಮಳೆ ಸುರಿದಲ್ಲಿ ತಕ್ಷಣ ಅಧಿಕಾರಿಗಳು ಗುರುತಿಸಲಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣ ಕುರಿತಂತೆ ಕ್ರಮ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಹರಿದಿರುವ ಮಲಪ್ರಭಾ ನದಿ ಹಾಗೂ ಬೆಣ್ಣೆ ಹಳ್ಳ ಪ್ರವಾಹದಿಂದ ನರಗುಂದ ತಾಲೂಕಿನ 16 ಹಾಗೂ ರೋಣ ತಾಲೂಕಿನ 16 ಗ್ರಾಮಗಳು ಪ್ರವಾಹಕ್ಕೊಳಗಾಗುವ ಸಂಭವವಿದ್ದು ಆ ಭಾಗದ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು. ತುಂಗಭದ್ರಾ ನದಿ ಪ್ರವಾಹದಿಂದ ಶಿರಹಟ್ಟಿ ತಾಲೂಕಿನ 10 ಹಾಗೂ ಮುಂಡರಗಿ ತಾಲೂಕಿನ 11 ಗ್ರಾಮಗಳು ಬಾಧಿತ ವಾಗುವ ಹಳ್ಳಿಗಳೆಂದು ಗುರುತಿಸಲಾಗಿದ್ದು ಅಲ್ಲಿಯೂ ಸಹ ಅಧಿಕಾರಿಗಳು ನಿರಂತರ ನಿಗಾ ವಹಿಸುವ ಮೂಲಕ ಜೀವ ಹಾನಿ ತಡೆಗೆ ಮುಂದಾಗುವಂತೆ ಸೂಚಿಸಿದರು.
ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪ್ರವಾಹದಿಂದ ಹಾನಿಗೊಳಗಾಗಬಹುದಾದ ಜನವಸತಿ ಪ್ರದೇಶಗಳಲ್ಲಿ ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ನರಗುಂದ ತಾಲೂಕಿನ 12, ರೋಣ ತಾಲೂಕಿನ 16 ಸ್ಥಳಗಳನ್ನು ಗುರುತಿಸಲಾಗಿದೆ. ಅದೇ ತರಹ ಮುಂಡರಗಿ ತಾಲೂಕಿನ 8, ಶಿರಹಟ್ಟಿ ತಾಲೂಕಿನ 10 ಸ್ಥಳಗಳನ್ನು ಗುರುತಿಸಿದೆ.ಅದರಂತೆ 4 ಗೋಶಾಲೆ ತೆರೆಯಲು ಸ್ಥಳ ನಿಗದಿಪಡಿಸಿ ಇಟ್ಟುಕೊಳ್ಳಲಾಗಿದೆ ಎಂದರು.
ಅತೀವೃಷ್ಟಿಯಿಂದಾಗುವ ಮನೆ ಹಾಗೂ ಬೆಳೆ ಹಾನಿಗೆ ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಿ ಪರಿಹಾರ ವಿತರಣೆ ಮಾಡಬೇಕು. ಅಗತ್ಯವಿದ್ದಲ್ಲಿ ಜಂಟಿ ಸಮೀಕ್ಷೆ ಮೂಲಕ ಹಾನಿಯ ಪ್ರಮಾಣ ಗುರುತಿಸಿ ಪರಿಹಾರಕ್ಕೆ ಮುಂದಾಗುವಂತೆ ಸೂಚಿಸಿದರು.
ದಿಢೀರ್ ಅತೀವೃಷ್ಟಿಯಿಂದ ಗ್ರಾಮಗಳು ಜಲಾವೃತವಾದಲ್ಲಿ ತಕ್ಷಣ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ರಕ್ಷಣಾ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಮಾಡಬೇಕು. ಕಾರ್ಯಾಚರಣೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೊಡ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.