ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಲು ಸೂಚನೆ
ಚನ್ನಮ್ಮನ ಕಿತ್ತೂರು,ಜೂ.20 ಮನುಷ್ಯನಿಗೆ ರೋಗ ಬರಲು ಕಾರಣ ಕಲುಷಿತ ನೀರು, ವಾತಾವರಣ, ಅದಕ್ಕಾಗಿ ನೀರನ್ನು ಕುದಿಸಿ ಕುಡಿಯಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸ್ಥಳೀಯ ತಾಪಂದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ದೀಪಬೆಳಗಿಸಿ ಮಾತನಾಡಿದ ಅವರು. ಗ್ರಾಮಗಳಲ್ಲಿ ಪೈಪಲೈನಗಳು ಒಡೆದು ಲೀಕೇಜ್ ಆದರೆ ಕಲುಷಿತ ನೀರು ಸೇರದಂತೆ ನೋಡಿಕೊಂಡು ದುರಸ್ತಿಗೊಳಿಸಬೇಕು. ಶುದ್ಧ ನೀರು ಪೂರೈಕೆಯಾಗುವಂತೆ ಇದರ ಎಲ್ಲ ಜವಾಬ್ದಾರಿ ವಾಟರಮನ್ ಮತ್ತು ಪಿಡಿಓಗಳದ್ದಾಗಿದೆ ಎಂದು ಎಚ್ಚರಿಕೆ ನೀಡಿದರು.
ಪಿಡಿಓಗಳಿಗಿಂತ ವಾಟರಮನ್‍ಗಳೇ ಹೆಚ್ಚು ಕಾಳಜಿವಹಿಸಬೇಕು. ನೀರು ಪೋಲಾಗದಂತೆ ನೋಡಿಕೊಂಡು ಶಾಲೆ-ಅಂಗನವಾಡಿಗಳಿಗೆ ಶುದ್ಧ ನೀರು, ವಿದ್ಯುತ್ ಪೂರೈಕೆಯಾಗಬೇಕು. ಸಾಂಕ್ರಾಮಿಕ ಡೆಂಗ್ಯೂ, ಮಲೇರಿಯಾ ಸೇರಿದಂತೆ ಇನ್ನಿತರ ಯಾವುದೇ ಕಾಯಿಲೆಗಳು ಹರಡದಂತೆ ಎಚ್ಚರವಹಿಸಬೇಕು. ಮಕ್ಕಳು ಶಾಲೆ ಬಿಟ್ಟು ಹೊರಗಡೆ ಹೋಗಬಾರದು ಹಾಗೇನಾದರೂ ಆದರೆ ಶಿಕ್ಷಕರೆ ಹೊಣೆಗಾರರು ಶಾಲೆಗಳಿಗೆ ನೀರು ಕೊರತೆಯಾಗದಂತೆ ಪಿಡಿಓಗಳು ಗಮನವಹಿಸಿ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.