ಹಿಂದುಳಿದ ಜಿಲ್ಲೆ ಹಣೆಪಟ್ಟಿ ಅಳಸಿಹಾಕಲು ಸಹಕರಿಸಿ
ಕೋಲಾರ,ಜೂ,೨೦- ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ನೆರವಾಗಿ ಹಾಗೂ ಕೋಲಾರಕ್ಕೆ ಅಂಟಿಕೊಂಡಿರುವ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿ ಅಳಿಸಿಹಾಕಿ ರಾಜ್ಯಕ್ಕೆ ಮಾದರಿಯಾಗಿಸುವ ತಮ್ಮ ಪ್ರಯತ್ನಕ್ಕೆ ಎಲ್ಲಾ ಇಲಾಖೆಗಳ ನೌಕರರು ಸಹಕಾರ ನೀಡಿ ಎಂದು ನೂತನ ಸಂಸದ ಎಂ.ಮಲ್ಲೇಶಬಾಬು ಕರೆ ನೀಡಿದರು.
ನಗರದ ತಮ್ಮ ನಿವಾಸದಲ್ಲಿ ಬುಧವಾರ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೋಲಾರ ಜಿಲ್ಲೆಯ ಜನತೆ ನನಗೊಂದು ಉತ್ತಮ ಅವಕಾಶ ನೀಡಿದ್ದಾರೆ, ಅವರ ನಂಬಿಕೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದ್ದೇನೆ, ಜಿಲ್ಲೆಯ ಸಮಗ್ರ ಅಭಿವೃದ್ದಿಯ ನನ್ನ ಪ್ರಯತ್ನಕ್ಕೆ ಸರ್ಕಾರಿ ನೌಕರರು ಕೈಜೋಡಿಸಿ ಎಂದು ಮನವಿ ಮಾಡಿದರು.
ಕೋಲಾರ ಜಿಲ್ಲೆ ಹಿಂದುಳಿದಿದೆ ಎಂಬ ಅಪವಾದದಿಂದ ಮುಕ್ತವಾಗಿಸಲು ನಾನು ಸಂಕಲ್ಪ ತೊಟ್ಟಿದ್ದೇನೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಸಿಗಬಹುದಾದ ಎಲ್ಲಾ ರೀತಿಯ ನೆರವು, ಸೌಲಭ್ಯಗಳನ್ನು ನನ್ನ ಕೈಲಾದಷ್ಟು ಒತ್ತಡ ಹಾಕಿ ತರುವ ಪ್ರಯತ್ನ ಮಾಡುತ್ತೇನೆ ಎಂದರು. ನನ್ನ ಪ್ರಯತ್ನಗಳಿಗೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರು ಬೆಂಬಲವಾಗಿದ್ದು, ಅವರು ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ದಿ ಜತೆಗೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ತಮ್ಮ ಪ್ರಯತ್ನಕ್ಕೆ ಸಹಕಾರ ನೀಡಲಿದ್ದಾರೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ,ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲೆಯ ಅಭಿವೃದ್ದಿಗೆ ನಡೆಯುವ ತಮ್ಮ ಪ್ರಯತ್ನಕ್ಕೆ ಸದಾ ತಮ್ಮೊಂದಿಗೆ ಇರುತ್ತದೆ, ತಾವು ತಂದ ಯೋಜನೆಗಳನ್ನು ಜನತೆಗೆ ತಲುಪಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ ಎಂದರು.
ನೌಕರರು ಸಹಾ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ, ವೇತನ ಆಯೋಗದ ವರದಿ ಜಾರಿಯಾಗಿಲ್ಲ ಎಂಬ ನೋವು ನಮ್ಮ ನೌಕರರಲ್ಲಿದ್ದು, ಇದರ ಕುರಿತು ರಾಜ್ಯ ಸರ್ಕಾರದ ಗಮನಸೆಳೆಯಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್‌ಬಾಬು, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ್, ಸರ್ವೇ ಇಲಾಖೆಯ ವಿಜಯ್, ರಾಮರೆಡ್ಡಿ, ರವಿ,ಚಂದು,ಸುನೀಲ್ ಮತ್ತಿತರರಿದ್ದರು.