ಅನೀಮಿಯಾ ಮುಕ್ತ ಕರ್ನಾಟಕ ನಮ್ಮ ಗುರಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.20:- ಆರೋಗ್ಯ ಸೇವೆಗಳನ್ನು ಅಭಿವೃದ್ಧಿ ಪಡಿಸಿ ಉತ್ತಮ ಆರೋಗ್ಯ ಸೇವೆಗಳನ್ನು ನೀಡುವುದು ಹಾಗೂ ರಾಜ್ಯವನ್ನು ಅನೀಮಿಯಾ ಮುಕ್ತ ಕರ್ನಾಟಕ ಮಾಡುವುದು ನಮ್ಮ ಗುರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸಿಕಲ್‍ಸೆಲ್ ಅನೀಮಿಯಾ ನಿರ್ಮೂಲನಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಸಹಯೋಗದಲ್ಲಿ ರೂಪಿಸಿರುವ ಪ್ರಾಜೆಕ್ಟ್ ಚಂದನ ಯೋಜನೆಯನ್ನು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2 ವರ್ಷ ಅವಧಿಗೆ ಜಾರಿಗೊಳಿಸಲಾಗುತ್ತಿದೆ.
ಸಿಕಲ್‍ಸೆಲ್ ಅನೀಮಿಯಾ ರೋಗದ ಪತ್ತೆ, ಜಾಗೃತಿ ಹಾಗೂ ಚಿಕಿತ್ಸೆ ನೀಡುವುದು ಗುರಿಯಾಗಿದ್ದು, ಸರಳವಾಗಿ ಸಿಕಲ್ ಸೆಲ್ ಅನೀಮಿಯಾ ಕಂಡು ಹಿಡಿಯುವ ಸಾಧನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದು, ಇಂಡಿಯನ್ ಆಯಿಲ್ ಕಾಪೆರ್Çರೇಷನ್ ಕಂಪನಿ ಈ ಸಾದನಗಳನ್ನು ಕೊಡುಗೆಯಾಗಿ ನೀಡುತ್ತಿದೆ ಎಂದರು.
7 ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಪರೀಕ್ಷೆ ಮಾಡಿದ್ದು ಚಾಮರಾಜನಗರ, ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬಂದಿದೆ. ಸಿಕಲ್ ಸೆಲ್ ಅನೀಮಿಯಾ ಒಂದು ಅನುವಂಶೀಯ ಕಾಯಿಲೆ ಆಗಿದ್ದು, ಸಿಕಲ್ ಸೆಲ್ ಅನೀಮಿಯಾ ಇರುವವರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಚಾಮರಾಜನಗರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬಂದಿದೆ. ಇದನ್ನು ನಿರ್ಮೂಲನೆ ಮಾಡಲು ಹೆಚ್ಚಾಗಿ ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ನನ್ನ ಕಡೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಹೆಚ್ಚಾಗಿ ಸಿಕಲ್ ಸೆಲ್ ಅನೀಮಿಯಾ ಕಂಡುಬರುತ್ತಿದೆ. ಅರಣ್ಯ ಪ್ರದೇಶದ ಹಾಡಿಗಳಲ್ಲಿ ವಾಸಿಸುತ್ತಿರುವರಲ್ಲಿ ಮಲೇರಿಯಾ, ಚಿಕನ್ ಗುನ್ಯಾ ಹೆಚ್ಚಾಗಿ ಕಂಡುಬರುತ್ತದೆ. ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ಜನರು ಮದುವೆ ಆಗುವಾಗ ಜೆನೆಟಿಕ್ಸ್ ಟೆಸ್ಟ್ ಮಾಡಿಸಿ ಮದುವೆ ಆಗುವುದು ಉತ್ತಮ. ಸಿಕಲ್ ಸೆಲ್ ಅನೀಮಿಯಾ ಇರುವವರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದರು.
ಶಾಸಕ ಕೆ.ಹರೀಶ್‍ಗೌಡ ಮಾತನಾಡಿ, ಮೈಸೂರು ಜಿಲ್ಲಾ ಆಸ್ಪತ್ರೆ ಉತ್ತಮ ಮಟ್ಟದ ಚಿಕಿತ್ಸೆ ನೀಡುತ್ತಿದೆ. ಒಂದು ವರ್ಷದ ಹಿಂದೆ ಜಿಲ್ಲಾ ಆಸ್ಪತ್ರೆಯಲ್ಲಿ ಮಾಸಿಕ 30 ರಿಂದ 40 ಹೆರಿಗೆಗಳು ಆಗುತ್ತಿದ್ದವು. ಉತ್ತಮ ಸೌಲಭ್ಯಗಳನ್ನು ಸಚಿವರು ಒದಗಿಸಿದ್ದರಿಂದ ಇಂದು ಮಾಸಿಕ 250ರವರೆಗೆ ಹೆರಿಗೆಗಳು ಆಗುತ್ತಿವೆ. ಸಿಕಲ್ ಸೆಲ್ ಅನೀಮಿಯಾ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸಿ ಎಂದರು.
ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಸೇವೆಗಳ ಅಭಿಯಾನದ ನಿರ್ದೇಶಕ ಡಾ.ನವೀನ್ ಭಟ್ ಮಾತನಾಡಿ, ಸಿಕಲ್ ಸೆಲ್ ಅನೀಮಿಯಾ ಒಂದು ಅನುವಂಶೀಯ ರಕ್ತ ಕಣದ ಕಾಯಿಲೆಯಾಗಿದೆ. ಸಿಕಲ್ ಸೆಲ್ ಅನೀಮಿಯಾ ಹೆಚ್ಚಾಗಿ ಹಾಡಿ ಜನಾಂಗ ಹಾಗೂ ಬುಡಕಟ್ಟು ಜನಾಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 57 ಸಾವಿರಕ್ಕೂ ಹೆಚ್ಚು ಜನರಿಗೆ ರಕ್ತ ಪರೀಕ್ಷೆ ಮಾಡಿದ್ದು, 2018 ಜನರಲ್ಲಿ ಸಿಕಲ್ ಸೆಲ್ ಅನೀಮಿಯಾ ಕಂಡುಬಂದಿದ್ದು ಚಿಕಿತ್ಸೆ ನೀಡಲಾಗುತ್ತಿದೆ. 2047ರೊಳಗೆ ಈ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಇದೇ ವೇಳೆ ಸಿಕಲ್ ಸೆಲ್ ಅನೀಮಿಯಾ ಕಾಯಿಲೆಗೆ ತುತ್ತಾಗಿರುವ ಮಕ್ಕಳಿಗೆ ಜೆನಿಟಿಕ್ಸ್ ಕಾರ್ಡ್‍ಗಳನ್ನು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಯುವ ವಿಜ್ಞಾನಿ ಸಾಯಿ ಶಿವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.