ಯಲ್ದೂರು ಸರ್ಕಾರಿಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಕೋಲಾರ,ಜೂ,೨೦- ಜಿಲ್ಲೆಯ ಯಲ್ದೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಿನ ಟಿ.ಎನ್.ನಾಗರಾಜಶೆಟ್ಟಿ ನೋಟ್ ಪುಸ್ತಕ, ಬ್ಯಾಗ್, ಹೆಣ್ಣು ಮಕ್ಕಳಿಗೆ ಶೃಂಗಾರ ಸಲಕರಣೆಗಳ ಕಿಟ್ ವಿತರಿಸಿ ಹೃದಯವಂತಿಕೆ ಮೆರೆದರು.
ಇದೇ ಸಂದರ್ಭದಲ್ಲಿ ಯಲ್ದೂರು ಸುತ್ತಮುತ್ತಲ ಸರ್ಕಾರಿ ಶಾಲೆಗಳ ಮಕ್ಕಳಿಗೂ ನೋಟ್ ಪುಸ್ತಕ ವಿತರಿಸಿದ ಅವರ ಕಾರ್ಯದಿಂದ ಸರ್ಕಾರಿ ಶಾಲೆಗಳ ಬಲವರ್ಧನೆ ಸಾಧ್ಯವಾಗಿದೆ ಎಂದು ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಜಿ.ಎಂ.ಮುರಳಿ ತಿಳಿಸಿದರು.
ಶಾಲೆಯ ಹಿರಿಯ ಶಿಕ್ಷಕ ಕೃಷ್ಣಸಿಂಗ್ ಈ ಸಂದರ್ಭದಲ್ಲಿ ಮಾತನಾಡಿ, ಟಿ.ಎನ್.ನಾಗರಾಜಶೆಟ್ಟಿ ಅವರು ಮೂಲತಃ ಯಲ್ದೂರಿನವರಾಗಿದ್ದು, ಇಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳ ಮೇಲಿರುವ ಅವರ ಪ್ರೀತಿ ಶ್ಲಾಘನೀಯ ಎಂದು ತಿಳಿಸಿದರು.
ಇಂದು ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವಿನ ಅಗತ್ಯವಿದೆ ಎಂದ ಅವರು ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುತ್ತಿದೆ ಆದರೆ ಪೋಷಕರಲ್ಲಿ ಕೀಳಿರಿಮೆ ಹೋಗಲಾಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ದಾನಿಗಳ ನೆರವು ಶಾಲೆಗಳ ಬಲವರ್ಧನೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘದ ಖಜಾಂಚಿ ಟಿ.ಎ.ಪ್ರಕಾಶ್‌ಬಾಬು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ಮಹಾನ್ ವ್ಯಕ್ತಿಗಳಾಗಿದ್ದಾರೆ, ಇಲ್ಲಿ ನುರಿತ ಶಿಕ್ಷಕರಿದ್ದು, ಪೋಷಕರು ಧೈರ್ಯದಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು, ಅವರ ಭವಿಷ್ಯ ಉಜ್ವಲಗೊಳಿಸುವ ಸಂಕಲ್ಪದೊಂದಿಗೆ ಇಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಮತಾರಾಣಿಕ, ಸುನಂದಮ್ಮ, ಉಷಾರಾಣಿ, ಸುರೇಶ್‌ಕುಮಾರ್, ನಂಜಾರೆಡ್ಡಿ, ಶಿವಕುಮಾರ್ ಮತ್ತಿತರರಿದ್ದರು.