ಇಂಧನ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.20:- ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ಜೆಡಿಎಸ್ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ವೃತ್ತದಲ್ಲಿ ಜಮಾಯಿಸಿದ ಶಾಸಕರು, ಮುಖಂಡರು, ಕಾರ್ಯಕರ್ತರು ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಜನ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಇಳಿಸಿ ಪೆಟ್ರೋಲ್ ಡಿಸೇಲ್ ಬೆಲೆ ಇಳಿಸಿ ಎಂದು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕತ್ತರಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿ ಜನರಿಗೆ ಬರೆ ಹಾಕಿದೆ. ಹೆಚ್ಚಿನ ಆರ್ಥಿಕ ಹೊರೆ ಹೊರಿಸಿ ಸಾಲಗಾರನ್ನಾಗಿ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುವುದು ಸೂಕ್ಷ್ಮ ವಿಚಾರ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ರಾಜ್ಯಗಳ ಬೆಲೆಗಳಿಗೆ ಹೋಲಿಕೆ ಮಾಡುತ್ತಿರುವುದು ಖಂಡನೀಯ ಎಂದು ಕಿಡಿ ಕಾರಿದರು.
ಆಟೋದಲ್ಲಿ ಓಡಾಡುವವರು, ದ್ವಿಚಕ್ರ ವಾಹನಗಳನ್ನು ಬಳಸುವವರು ಬಡವರು. ಅವರು 103 ರೂ. ನೀಡಿ ಪೆಟ್ರೋಲ್, ಡಿಸೇಲ್ ಹಾಕಿಸುವುದು ಕಷ್ಟದ ವಿಚಾರ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಕ್ಕರ್, ಆಸ್ತಿ ನೋಂದಣಿ ಶುಲ್ಕ ಸೇರಿದಂತೆ ಒಂದರ ಮೇಲೊಂದರಂತೆ ದರ ಏರಿಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಈಗ ನೀರಿನ ಬಿಲ್ ಏರಿಕೆ ಮಾಡಲು ಚಿಂತಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ 18 ರಿಂದ 25 ಸೀಟ್‍ಗಳನ್ನು ಕಾಂಗ್ರೆಸ್ ಗೆಲ್ಲುತ್ತೇವೆಂದು ಹೇಳಿಕೊಂಡಿತ್ತು. ಆದರೆ, ಕೇವಲ 9 ಸೀಟ್ ಪಡೆದುಕೊಂಡಿದ್ದು, ಅದರಲ್ಲಿಯೂ 25 ಸಾವಿರದಿಂದ 30 ಸಾವಿರ ಲೀಡ್‍ನಿಂದ ಗೆದ್ದಿದ್ದಾರೆ. ಆದರೆ, ಮೈತ್ರಿ ಅಭ್ಯರ್ಥಿಗಳು 2 ರಿಂದ 3 ಲಕ್ಷ ಲೀಡ್ ಪಡೆದುಕೊಂಡಿದ್ದಾರೆ. ಈ ಸೇಡಿನಿಂದ ಕಾಂಗ್ರೆಸ್ ಈ ರೀತಿ ಬೆಲೆ ಏರಿಕೆ ಮಾಡುತ್ತಿದೆ. ಕಾಂಗ್ರೆಸ್ ನಿಜವಾಗಿಯೂ ಬಡವರ ಪರವಾಗಿದ್ದರೆ, ತಕ್ಷಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯದ ವಿವಿಧ ನಿಗಮ ಮಂಡಳಿಗಳ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದು, ತೆಲಂಗಾಣದ ಚುನಾವಣೆಗೆ ಬಳಸಿಕೊಂಡಿದ್ದಾರೆ. ಈ ಕುರಿತು ಸಿಬಿಐ ತನಿಖೆಯಾಗಬೇಕು. ಮುಂದಿನ ಅಧಿವೇಶನದಲ್ಲಿ ಈ ಎಲ್ಲಾ ಅಂಶಗಳ ಕುರಿತು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಂಎಲ್‍ಸಿಗಳಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಮೇಯರ್ ಆರ್.ಲಿಂಗಪ್ಪ, ಮಾಜಿ ನಗರ ಪಾಲಿಕೆ ಸದಸ್ಯರಾದ ಎಸ್‍ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಶಿವಣ್ಣ, ಹೆಚ್.ಕೆ.ರಾಮು, ಸವಿತಾ ಸುರೇಶ್, ಭಾಗ್ಯ ಮಹದೇಶ್, ಎಂ.ಶಿವಣ್ಣ, ಅಶ್ವಿನಿ ಅನಂತ್, ರಮಣಿ, ಕೆ.ವಿ.ಶ್ರೀಧರ್, ಹೆಚ್.ಕೆ.ರಮೇಶ್, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಫಾಲ್ಕನ್ ಬೋರೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.