ಒಂದುಕಡೆ ಉಚಿತ ಮತ್ತೊಂದು ಕಡೆ ಸುಲಿಗೆ: ರಾಜ್ಯ ಸರ್ಕಾರದ ವಿರುದ್ಧ ತಮಟೆ ಚಳುವಳಿ ನಡೆಸಿ ಕನ್ನಡ ಸಂಘಟನೆಗಳ ಆಕ್ರೋಶ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.20- ರಾಜ್ಯ ಸರ್ಕಾರ ಇಂಧನ ಬೆಲೆ ಏರಿಕೆ ಖಂಡಿಸಿ ಕನ್ನಡ ಪರ ಹೋರಾಟಗಾರರು ತಮಟೆ ಚಳವಳಿ ನಡೆಸಿ ಆಕ್ರೋಶ ಹೊರಹಾಕಿದರು.
ಅವರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಹೋರಾಟಗಾರ ಚಾ.ರಂ. ಶ್ರೀನಿವಾಸ ಗೌಡ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಹೋರಾಟಗಾರ ಚಾ.ರಂ. ಶ್ರೀನಿವಾಸ ಗೌಡ ರಾಜ್ಯ ಸರ್ಕಾರ ಒಂದು ಕಡೆ ಉಚಿತ ಎಂದು ಗ್ಯಾರಂಟಿ ಯೋಜನೆ ಕೊಡುತ್ತಿದ್ದಾರೆ, ಮತ್ತೊಂದೆಡೆ ಬೆಲೆ ಏರಿಕೆ ಮಾಡಿ ಸುಲಿಗೆ ಮಾಡುತ್ತಿದ್ದಾರೆ, ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡನೀಯ, ಈಗಾಗಲೇ ಮುದ್ರಾಂಕ ಶುಲ್ಕ, ಛಾಪಾಕಾಗದಗಳ ಬೆಲೆಗಳನ್ನು ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಈಗ ತೈಲ ಬೆಲೆ ಹೆಚ್ಚಳ ಮಾಡಿ ಜನರನ್ನು ಮತ್ತಷ್ಟು ಕಷ್ಟದ ಕೂಪಕ್ಕೆ ದೂಡಿದೆ ಎಂದು ಆಕ್ರೋಶ ಹೊರಹಾಕಿದರು.
ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ನಡು ರಸ್ತೆಯಲ್ಲಿ ತಮಟೆ ಬಾರಿಸಿ ಸಿಎಂ, ಡಿಸಿಎಂ ವಿರುದ್ಧ ಪ್ರತಿಭಟಿಸಿದ ಹೋರಾಟಗಾರರು ಕೂಡಲೇ ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಇಳಿಸುವಂತೆ ಒತ್ತಾಯಿಸಿದರು.
ಮುಖಂಡರಾದ ಚಾ.ವೆಂ. ರಾಜಗೋಪಾಲ್, ಗು. ಪುರುಷೋತ್ತಮ್, ನಿಜಧನಿ ಗೋವಿಂದರಾಜು, ದೊಡ್ಡರಾಯಪೇಟೆ ಮಹೇಶ್ ಸೇರಿದಂತೆ ಅನೇಕ ಕನ್ನಡ ಪರ ಸಂಘಟೆಗಳ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.