7ನೇ ವೇತನ ಪರಿಷ್ಕರಣೆ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.20: 7ನೇ ವೇತನ ಪರಿಷ್ಕರಣೆ ಜಾರಿ, ಹಳೆಯ ನಿಶ್ಚಿತ ಪಿಂಚಣಿ ಮರುಸ್ಥಾಪನೆ ಸೇರಿದಂತೆ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾಧ್ಯಕ್ಷ ಸುರೇಶ ಜೀಬಿ ಅವರು ಮಾತನಾಡಿ, ರಾಜ್ಯದ 7 ಕೋಟಿ ಜನತೆಗೆ ಜಾರಿಯಾಗುವ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು 7.73 ಲಕ್ಷ ಮಂಜೂರಾದ ಹುದ್ದೆಗಳ ಪೈಕಿ ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ 5.12 ಲಕ್ಷ. ಭರ್ತಿಯಾಗದೇ ಖಾಲಿ ಉಳಿದ ಹುದ್ದೆಗಳು 2.60 ಲಕ್ಷದಷ್ಟಿದೆ. ವೇತನ ಸೌಲಭ್ಯಗಳ ನಷ್ಟ ಮತ್ತು ಖಾಲಿ ಹುದ್ದೆಗಳ ಹೊರೆ ಹಾಲಿ ನೌಕರರ ಮೇಲೆ ಬಿದ್ದಿದೆ. ಹಲವಾರು ವರ್ಷಗಳಿಂದ ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿರುವುದಿಲ್ಲವಾದ್ದರಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ. ಜೇಷ್ಠತಾ ಪಟ್ಟಿ ಸಿದ್ದಪಡಿಸಿ ಪದೋನ್ನತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಗೌರವಾಧ್ಯಕ್ಷ ಚಂದ್ರಶೇಖರ ಲೆಂಡಿ ಅವರು ಮಾತನಾಡಿ, ಹೊಸ ಪಿಂಚಣಿ ವ್ಯವಸ್ಥೆಯಿಂದಾಗಿ ಸರ್ಕಾರಿ ನೌಕರರಿಗೆ ಯಾವುದೇ ನಿಶ್ಚಿತ ಪ್ರಮಾಣದ ಪಿಂಚಣಿ ಸಿಗದೇ ನೌಕರರ ಬದುಕು ಬೀದಿಗೆ ಬಿದ್ದಂತಾಗಿದೆ. ನೌಕರರು ಮತ್ತು ಸರ್ಕಾರಗಳ ವಂತಿಕೆ ಹಣವನ್ನು μÉೀರು ಮಾರುಕಟ್ಟೆಯಲ್ಲಿ ಕಂಪನಿಗಳ ಭದ್ರತೆ ಒದಗಿಸಲು ತೊಡಗಿಸಿದಂತಾಗಿದೆ. ಆದ್ದರಿಂದ, ಎನ್.ಪಿ.ಎಸ್ ಪದ್ದತಿ ರದ್ದುಪಡಿಸಿ, ಹಳೆಯ ನಿಶ್ಚಿತ ಪಿಂಚಣಿ ವ್ಯವಸ್ಥೆ ಮರುಸ್ಥಾಪಿಸಲು ಸರ್ಕಾರವು ಆಶ್ವಾಸನೆ ನೀಡಿರುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ಅಶೋಕ ಇಲಕಲ್ ಅವರು ಮಾತನಾಡಿ, ಕರ್ನಾಟಕ ರಾಜ್ಯ 7ನೇ ವೇತನ ಆಯೋಗವು ತನ್ನ ಶಿಫಾರಸ್ಸುಗಳನ್ನು ಸಲ್ಲಿಸಲು ಎರಡು ಬಾರಿ ಅವಧಿ ವಿಸ್ತರಣೆ ಪಡೆದು, ಸುದೀರ್ಘ ಕಾಲದ ನಂತರ ಅಂತಿಮವಾಗಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. 7ನೇ ವೇತನ ಆಯೋಗದ ಶಿಫಾರಸ್ಸುಗಳು ಸ್ಪಷ್ಟವಾಗಿರದೇ ಗೊಂದಲದಿಂದ ಕೂಡಿದ್ದು, ನೌಕರರ ವೇತನ ಪ್ರಮಾಣವನ್ನು ಕಡಿತಗೊಳಿಸುವ ಕ್ರಮಗಳನ್ನು ಹೊಂದಿರುತ್ತದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಂಚಾಲಕಿ ದಾಕ್ಷಾಯಿಣಿ ಹುಡೇದ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳಲ್ಲಿ ಲಕ್ಷಾಂತರ ಯುವ ಜನತೆ ಯಾವುದೇ ಸೇವಾ ಭದ್ರತೆಯಾಗಲೀ, ಕನಿಷ್ಟ ವೇತನವಾಗಲೀ, ಕಾನೂನುಬದ್ದವಾಗಿ ನೀಡಬೇಕಾದ ಇ.ಎಸ್.ಐ, ಪಿ.ಎಫ್ ಸೌಲಭ್ಯಗಳಾಗಲೀ, ಮಾಸಿಕ ವೇತನ ಸರಿಯಾದ ದಿನಾಂಕಕ್ಕೆ ನೀಡುವುದಾಗಲೀ ಇದಾವುದೂ ಇಲ್ಲದೇ, ಹೊರಗುತ್ತಿಗೆ ನೌಕರರು ಆಧುನಿಕ ಜೀತಪದ್ದತಿಯಂತೆ ಹೊರಗುತ್ತಿಗೆ ಏಜೆನ್ಸಿಗಳ ಕಪಿಮುಷ್ಟಿಗೆ ಸಿಲುಕಿ ನರಳುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಸಿ ಎಸ್.ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಬಿ.ಎಚ್. ನಾಡಗಿರಿ, ನೀಲಮ್ಮ ಹಂದ್ರಾಳ, ಭಾರತಿ ನಿಪ್ಪಾಣಿ, ಸೋಮಪ್ಪ ಆಯಟ್ಟಿ, ಈರಣ್ಣ ಹೊಸಟ್ಟಿ, ಬಸವಂತ ಗುಣದಾಳ, ಗಾಜರೆ ವಡವಡಗಿ, ಬಿ.ಸಿ. ಗೋವರ್ಧನ, ಆರ್. ಆರ್. ಮೆಣಸಗಿ, ಜಿ.ಬಿ. ಅಂಗಡಿ, ಅರ್ಜುನ ಕವಟೇಕರ, ಗಿರೀಶ ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು.