ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ವಿರೋಧಿಸಿ ಎಸ್‍ಯುಸಿಐ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.20:ಪೆಟ್ರೋಲ್, ಡಿಸೇಲ್ ದರ ಏರಿಕೆ ವಿರೋಧಿಸಿ ಸೋಷಿಯಲಿಷ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯೂನಿಷ್ಟ್ ಪಕ್ಷದ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ ಕಮ್ಯೂನಿಷ್ಟಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಮಾತನಾಡಿ, ನಾವು ಜನಪರ, ಬಡವರ ಪರ ಎಂದು ಹೇಳಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ ಮಾಡುವ ಮೂಲಕ ಸಾಮಾನ್ಯ ಜನರ ಬೆನ್ನಿಗೆ ಚೂರಿ ಇರಿದಿದೆ. ಗ್ಯಾರಂಟಿ ಹೆಸರಲ್ಲಿ ಒಂದು ಕೈಯಿಂದ ಜನರಿಗೆ ಕೊಟ್ಟು ಪೆಟ್ರೋಲ್ ದರ ಹೆಚ್ಚಳದ ಹೆಸರಲ್ಲಿ ಮತ್ತೊಂದು ಕೈಯಿಂದ ಕಿತ್ತುಕೊಳ್ಳುವುದು ಇದು ಯಾವ ಜನಪರನೀತಿ ಎಂದು ಪ್ರಶ್ನಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರಿಗೆ ತಲಾ ರೂ. 3 ಏರಿಕೆ ಮಾಡಿರುವುದರಿಂದ ರಾಜ್ಯದ ಜನತೆ ರೂ.3000 ಕೋಟಿಗೂ ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಧಾರೆ ಎರಿಯಬೇಕಾಗುತ್ತದೆ. ಒಮ್ಮೆ ಇಂಧನ ದರ ಹೆಚ್ಚಳವಾದರೆ ಮುಂದೆ ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಏರಿಕೆಯಾಗುತ್ತದೆ. ಸರಕು ಸಾಗಣಿಕೆ ವೆಚ್ಚ ಹೆಚ್ಚಾದರೆ ದಿನಬಳಕೆಯ ವಸ್ತುಗಳಾದ ತರಕಾರಿ, ದವಸಧಾನ್ಯಗಳ ದರವೂ ಹೆಚ್ಚಾಗಿ ಜನ ಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗುತ್ತದೆ ಎಂದರು.
ಕೂಡಲೇ ರಾಜ್ಯ ಸರಕಾರ ಜನತೆಯ ಅಭಿಪ್ರಾಯಕ್ಕೆ ಮಾನ್ಯತೆ ನೀಡಿ ಹೆಚ್ಚಿಸಿರುವ ದರ ಕೂಡಲೇ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಎಸ್.ಯು.ಸಿ.ಐ ಜಿಲ್ಲಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹೆಚ್.ಟಿ.ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರ ದರ ಹೆಚ್ಚಳ ಮಾಡಿದಾಗ ಅದರ ವಿರುದ್ದ ಮಾತನಾಡಿರುವ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರುಗಳು ಈಗ ಅದೇ ಬೆಲೆ ಏರಿಕೆಯನ್ನು ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಇವೆರಡೂ ಜನದ್ರೋಹಿ ಪಕ್ಷಗಳು ಇವುಗಳ ವಿರುದ್ದ ಜನ ಬೀದಿಗಿಳಿದು ಪ್ರತಿಭಟಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಎಸ್.ಯು.ಸಿ.ಐ. ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಹೆಚ್.ಟಿ. ಭರತಕುಮಾರ ಹಾಗು ಸಂಘಟನಾಕಾರರಾದ ಶಿವರಂಜಿನಿ, ಕಾವೇರಿ, ಸಿದ್ರಾಮ ಹಿರೇಮಠ, ಪೀರಾ ಜಮಾದಾರ, ಮಹಾದೇವ ಲಿಗಾಡೆ ಮುಂತಾದವರು ಭಾಗವಹಿಸಿದ್ದರು