ರಾಜಕಾರಣಿಗಳಿಗೆ ಪ್ರಾಮಾಣಿಕತೆ ಇರಬೇಕು; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌
ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.19; ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಇತರೆ ಪಕ್ಷದಲ್ಲಿದ್ದವರೂ ಪಕ್ಷಾತೀತವಾಗಿ, ಎಲ್ಲಾ ಜಾತಿಯವರು ಜಾತ್ಯತೀತವಾಗಿ ಈ ಚುನಾವಣೆಯಲ್ಲಿ ನಿಮಗೆ ಬೆಂಬಲಿಸುವುದಾಗಿ ಹೇಳಿ, ಕೊಟ್ಟ ಮಾತಿನಂತೆ ತಮಗೆ ಮತ ನೀಡುವ ಮೂಲಕ ಗೆಲ್ಲಿಸಿದ್ದು, ತಮ್ಮ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ತಮ್ಮ ಗೆಲುವಿಗೆ ಜಾತಿ ಸಹ ಅಡ್ಡ ಬಂದಿಲ್ಲ. ನೀವು ಗೆಲ್ಲಬೇಕೆಂದು ಗೆಲ್ಲಿಸಿದ್ದಾರೆ. ಎಲ್ಲಾ ಪಕ್ಷದ ಎಲ್ಲರೂ ಅಲ್ಲದಿದ್ದರೂ, ಕೆಲವರು ನಮಗೆ ಬೆಂಬಲಿಸಿದರು ಎಂದರು.ತಮ್ಮ ಮಾವ ಶಾಮನೂರು ಶಿವಶಂಕರಪ್ಪನವರ ಮೇಲಿನ ಪ್ರೀತಿ, ಗೌರವ, ಶಾಮನೂರು ಮನೆತನದ ಮೇಲಿನ ಅಭಿಮಾನ ಇದ್ದವರೆಲ್ಲರೂ ನನಗೆ ಗೆಲ್ಲಿಸಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಬೆಂಬಲ ನೀಡಿದ್ದಾರೆ.