ಮೃತ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿ; ಬಿ.ವೈ ವಿಜಯೇಂದ್ರ ಆಗ್ರಹ

ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಜೂ.19: ಮೃತ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡಿ, ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿನ ಮೃತ ರೇಣುಕಾಸ್ವಾಮಿ ಮನೆಗೆ ಮಂಗಳವಾರ ಭೇಟಿ ನೀಡಿದ ಅವರು, ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿ, 2 ಲಕ್ಷ ರೂ. ಗಳ ಪರಿಹಾರವನ್ನು ಪಕ್ಷದ ವತಿಯಿಂದ ನೀಡಿದರು.ಭೀಕರವಾಗಿ ಕೊಲೆ ಮಾಡಿರುವ ಘಟನೆಯನ್ನು ನಾಗರಿಕ ಸಮಾಜ ಬೆಂಬಲಿಸಲು ಸಾಧ್ಯವಿಲ್ಲ. ಇದನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಈ ಭರ್ಬರ ಹತ್ಯೆ ರಾಜ್ಯದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿ ಚರ್ಚೆ ಆಗುತ್ತಿದ್ದು, ತಂದೆ-ತಾಯಿ ಹಾಗೂ ಹೆಂಡತಿ‌ಯನ್ನು ನೋಡಿದರೆ ದುಃಖ ಆಗುತ್ತದೆ. ಅವರಿಗೆ ಯಾವ ರೀತಿ ಧೈರ್ಯ ತುಂಬಬೇಕು ಎಂಬುದು ತಿಳಿಯುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.ಕೊಲೆ ನಡೆದು ಇಷ್ಟು ದಿನ‌ ಕಳೆದರೂ ಕೂಡ ಸರ್ಕಾರದ ಪರವಾಗಿ ಯಾವೊಬ್ಬ ಸಚಿವರು ಬಾರದೆ ಇರುವುದು ಖಂಡನೀಯ ಸಂಗತಿ. ಇಂತಹ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಆದರೂ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ಪರಿಹಾರ ಕೊಟ್ಟು, ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.ಕೊಲೆ ಪ್ರಕರಣದಲ್ಲಿ ಎಷ್ಟೇಲ್ಲಾ ದೊಡ್ಡ ವ್ಯಕ್ತಿಗಳು. ಭಾಗಿಯಾಗಿದ್ದಾರೆ ಎಂಬುದು ಜಗಜಾಹೀರು ಆಗಿದೆ. ಆದ್ದರಿಂದ ಸರ್ಕಾರ ಯಾರ ಮೂಲಾಜಿಗೂ ಒಳಗಾಗದೆ, ಪ್ರಮಾಣಿಕವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಬೇಕು  ಎಂದು ಒತ್ತಾಯಿಸಿದರು.ಈ ಪ್ರಕರಣದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಅದೇ ರೀತಿ ಯಾರು ಕೂಡ ರಾಜಕೀಯ ಮಾಡಬಾರದು. ನೊಂದಂತಹ ಕುಟುಂಬಕ್ಕೆ ಎಲ್ಲಾರೂ ಸೇರಿ ನ್ಯಾಯ ವದಗಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸದ ಗೋವಿಂದ‌ ಕಾರಜೋಳ, ಶಾಸಕರಾದ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಲಿಂಗಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.