ಜೂ. 21 ಕ್ಕೆ  ಸಂಭವಾಮಿ ಯುಗೇ ಯುಗೇ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೮: ಆಧುನಿಕತೆಯ ಸೋಗಿನಲ್ಲಿ ನಮ್ಮ ಹಳ್ಳಿಗಳಲ್ಲಿ ಮೊದಲಿದ್ದ ವೈಭವ ಕಡಿಮೆಯಾಗುತ್ತಿದೆ. ವಿದ್ಯಾವಂತರೆಲ್ಲ ಪಟ್ಟಣ ಸೇರುತ್ತಿದ್ದಾರೆ. ಹೀಗಾಗಬಾರದು, ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕೆನ್ನುವ ಸಂದೇಶ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಸಂಭವಾಮಿ ಯುಗೇ ಯುಗೇ ಎಂದು ಚಿತ್ರದ ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಯಕ ಹಾಗೂ ‌ನಾಯಕಿಯರಾಗಿ ಜಯ್‌ಶೆಟ್ಟಿ, ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವನ್ನು ಸಾಮಾಜಿಕ ಪರಿಕಲ್ಪನೆಯೊಂದಿಗೆ ಮಾಡಲಾಗಿದೆ ಎಂದರು.ಕುಟುಂಬದ ಸದಸ್ಯರು ಒಟ್ಟಾಗಿ ಕುಳಿತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಚಿತ್ರದಲ್ಲಿ ಮಹಾಭಾರತದ ಕೃಷ್ಣ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಾಗಿದ್ದು, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಪರಿಕಲ್ಪನೆ ಎಂದು ಮಾಹಿತಿ ನೀಡಿದರು.ನಾಯಕ ನಟ ಜಯಶೆಟ್ಟಿ ಮಾತನಾಡಿ, ನನ್ನ ಮೊದಲ ಚಿತ್ರ 1975. ಇದು ನನ್ನ ಎರಡನೇ ಚಿತ್ರವಾಗಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು, ಉತ್ತಮ ಸಂದೇಶವಿದೆ. ಸುಮಾರು 100 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಸಿನಿಮಾ ಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಆಶೀರ್ವದಿಸಿ ಎಂದರು.ನಾಯಕ ನಟಿ ನಿಶಾ ರಜಪೂತ್ ಮಾತನಾಡಿ, ನಾನು ಬಿಜಾಪುರದಳಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ದಕ್ಷಿಣ ಕರ್ನಾಟಕದ ಹಳ್ಳಿ ಹುಡುಗಿಯಾಗಿ ಪಾತ್ರ ವಹಿಸಿದ್ದೇನೆ. ಚಿತ್ರ ವೀಕ್ಷಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.