ನಡು ರಸ್ತೆಯಲ್ಲೇ ವಾಹನಗಳ ದಾಖಲೆ ಪರಿಶೀಲನೆ : ಸಂಚಾರಕ್ಕೆ ಮತ್ತಷ್ಟು ಸಂಕಷ್ಟ
ಕಲಬುರಗಿ,ಸೆ.25-ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡು ರಸ್ತೆಯಲ್ಲೇ ಸಂಚಾರಿ ಪೊಲೀಸರು ವಾಹನಗಳನ್ನು ತಡೆದು ದಾಖಲೆಗಳನ್ನು ತಪಾಸಣೆ ನಡೆಸುತ್ತಿರುವುದರಿಂದ ಸಂಚಾರಕ್ಕೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.
ಕೇಂದ್ರ ಬಸ್ ನಿಲ್ದಾಣ ರಸ್ತೆಯಲ್ಲಿ ಬಸ್, ಆಟೋ, ಕಾರು, ಬೈಕ್ ಸೇರಿದಂತೆ ನಿತ್ಯ ಸಹಸ್ರಾರು ವಾಹನಗಳು ಓಡಾಡುತ್ತವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಮತ್ತಿತರ ದಾಖಲೆಗಳ ಪರಿಶೀಲಿಸಲು ನಡು ರಸ್ತೆಯಲ್ಲೇ ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿರುವುದರಿಂದ ಉಳಿದ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ.
ನಿಯಮಾನುಸಾರ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲು ಯಾರ ವಿರೋಧವೂ ಇಲ್ಲ. ಆದರೆ ದಾಖಲೆಗಳ ಪರಿಶೀಲನೆಯನ್ನೇ ನೆಪವಾಗಿಸಿಕೊಂಡು ನಡು ರಸ್ತೆಯಲ್ಲೇ ವಾಹನಗಳನ್ನು ತಡೆದು ಉಳಿದ ವಾಹನಗಳ ಓಡಾಟಕ್ಕೆ ಸ್ವತ: ಸಂಚಾರಿ ಪೊಲೀಸರೇ ಅಡ್ಡಿ ಪಡಿಸುತ್ತಿರುವುದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಬಸ್ ನಿಲ್ದಾಣದ ಮುಖ್ಯದ್ವಾರದ ಬಳಿ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನಗಳ ಓಡಾಟಕ್ಕೆ ಮತ್ತಷ್ಟು ತೊಂದರೆಯಾಗುತ್ತಿದೆ. ಹಿರಿಯ ಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.