ಪರಿಸರ ಆರೋಗ್ಯ ಕಾಪಾಡುವುದು ಅಗತ್ಯ
ಕಲಬುರಗಿ:ಸೆ.25: ಜಗತ್ತಿನ ಸಕಲ ಜೀವರಾಶಿಗಳು ಉಳಿದು, ಸಮೃದ್ಧವಾಗಿ ಬೆಳವಣಿಗೆಯಾಗಬೇಕಾದರೆ ಪರಿಸರದ ಪಾತ್ರ ಪ್ರಮುಖವಾಗಿದೆ. ಪರಿಸರದ ಸ್ವಚ್ಛತೆ ಕಾಪಾಡುವುದು, ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಮಾಲಿನ್ಯದ ನಿಯಂತ್ರಿಸಿ ಪರಿಸರ ಆರೋಗ್ಯವನ್ನು ಕಾಪಾಡುವುದು ಅಗತ್ಯವಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಪರಿಸರ ಆರೋಗ್ಯ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿವಿಧ ಮಾಲಿನ್ಯಗಳಿಂದ ಪರಿಸರ ತತ್ತರಿಸಿ ಹೋಗಿದೆ. ಮಾಲಿನ್ಯ ನಿಯಂತ್ರಣ ನೀತಿ-ನಿಯಮಗಳು, ಸರ್ಕಾರ, ಪರಿಸರ ಪ್ರೇಮಿಗಳಿಂದ ಮಾತ್ರ ಸಾಧ್ಯವಿಲ್ಲ. ಜೊತೆಗೆ ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಸ್ವಚ್ಛತೆಯನ್ನು ಕಾಪಾಡುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಕಾರ್ಯವಾಗಬೇಕು. ಎಲೆಕ್ಟ್ರಿಕ್ ವಾಹನಗಳ ಬಳಕಗೆ ಆದ್ಯತೆ, ವೈಯಕ್ತಿಕ ವಾಹನದ ಬದಲಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸುವುದು, ರಾಸಾಯನಿಕಗಳ ಬಳಕೆ ನಿಷೇಧಿಸುವುದು ಸೇರಿದಂತೆ ಇನ್ನಿತರರ ಕ್ರಮಗಳಿಂದ ಪರಿಸರ ಸಂರಕ್ಷಣೆಯಾಗಲು ಸಾಧ್ಯವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಪರಿಸರ ಮಾಲಿನ್ಯ ತಡೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ, ವನಮಹೋತ್ಸವ, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ, ಇ-ತಾಜ್ಯ ಪುನರ್ಬಳಕೆ, ಆಹಾರ ಪದಾರ್ಥಗಳನ್ನು ಹಾಳಾಗದಂತೆ ಎಚ್ಚರವಹಿಸುವುದು, ಸಾವಯುವ ಬೇಸಾಯಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ, ವಿಜಯಲಕ್ಷ್ಮೀ, ಅಭಿಶೇಕ, ಪವನಕುಮಾರ ಹಾಗೂ ವಿದ್ಯಾರ್ಥಿಗಳಿದ್ದರು.