ಕೆವೈಸಿ ಅಪಡೇಟ್ ಹೆಸರಲ್ಲಿ 65 ಸಾವಿರ ಪಂಗನಾಮ !
ಕಲಬುರಗಿ,ಜೂ.19-ಎಸ್‍ಬಿಐ ಬ್ಯಾಂಕ್ ನೌಕರನೆಂದು ಹೇಳಿ ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರೊಬ್ಬರಿಗೆ ಕರೆ ಮಾಡಿ ಬ್ಯಾಂಕ್ ಖಾತೆ ಕೆವೈಸಿ ಅಪಡೇಟ್ ಮಾಡುವುದಿದೆ ಎಂದು ನಂಬಿಸಿ ಅವರ ಖಾತೆಯಲ್ಲಿದ್ದ 65 ಸಾವಿರ ರೂ.ಡ್ರಾ ಮಾಡಿಕೊಂಡು ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸೇಡಂನ ನೃಪತುಂಗ ಡಿಗ್ರಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಚಿತ್ರಶೇಖರ ಗಂಗಾಧರ ರ್ಯಾಕಾ ಅವರ ಮೊಬೈಲ್ ನಂಬರ್‍ಗೆ ಅಪರಿಚಿತ ವ್ಯಕ್ತಿಯೊಬ್ಬ ಎಸ್‍ಬಿಐ ಬ್ಯಾಂಕ್ ನೌಕರನೆಂದು ಹೇಳಿ ಕರೆ ಮಾಡಿ “ನಿಮ್ಮ ಬ್ಯಾಂಕ್ ಖಾತೆ ಕೆವೈಸಿ ಅಪಡೇಟ್ ಆಗಿರುವುದಿಲ್ಲ. ಖಾತೆ ಬ್ಲಾಕ್ ಆಗಿದೆ. ಕೂಡಲೇ ಕೆವೈಸಿ ಮಾಡಲು ಆಧಾರ್ ಕಾರ್ಡ್ ಕಳುಹಿಸಿ” ಎಂದಿದ್ದಾನೆ. ಆಗ ಚಿತ್ರಶೇಖರ್ ಅವರು ಆ ವ್ಯಕ್ತಿಯ ಮೊಬೈಲ್ ನಂಬರ್‍ಗೆ ಆಧಾರ್ ಕಾರ್ಡ್ ಕಳುಹಿಸಿದ್ದಾರೆ. ಪುನ: ಆ ವ್ಯಕ್ತಿ ಇವರ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ವಿವರ ಕೇಳಿ ಮೊಬೈಲ್ ನಂಬರ್‍ಗೆ 65 ಸಾವಿರ ರೂ.ಫೋನ್ ಪೇ ಮಾಡುವಂತೆ ತಿಳಸಿದ್ದಾನೆ. ಇವರು ಫೋನ್ ಪೇ ಉಪಯೋಗಿಸದೆ ಇದ್ದುದ್ದರಿಂದ ಹಣ ಕಳುಹಿಸಿಲ್ಲ. ನಂತರ ಆ ವ್ಯಕ್ತಿ ಇವರ ವ್ಯಾಟ್ಸಪ್ ನಂಬರ್‍ಗೆ ಕ್ಯೂಆರ್ ಕೋಡ್ ಕಳುಹಿಸಿ ಅದನ್ನು ಸ್ಕ್ಯಾನ್ ಮಾಡಿ 65 ಸಾವಿರ ರೂ.ನಮೂದಿಸಲು ತಿಳಿಸಿದ್ದಾನೆ. ಅದರಂತೆ ಚಿತ್ರಶೇಖರ್ ಅವರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 65 ಸಾವಿರ ರೂ.ಪೇ ಮಾಡಿದ್ದಾರೆ. ಆಗ ಇವರ ಮೊಬೈಲ್‍ಗೆ 65 ಸಾವಿರ ರೂ.ಹಣ ಡ್ರಾ ಮಾಡಿದ ಮೆಸೇಜ್ ಬಂದಿದೆ. ಇದರಿಂದ ಗಾಬರಿಗೊಂಡು ಅವರು ತಕ್ಷಣವೇ ಆ ವ್ಯಕ್ತಿಯ ಮೊಬೈಲ್ ನಂಬರ್‍ಗೆ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ.
ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ ಮಾಡುವುದಿದೆ ಎಂದು ನಂಬಿಸಿ 65 ಸಾವಿರ ರೂ.ವಂಚನೆ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಚಿತ್ರಶೇಖರ ಅವರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.