ಕಲಬುರಗಿ: ಸಿಪಿಐ(ಎಂ) ಪ್ರತಿಭಟನೆ
ಕಲಬುರಗಿ,ಜೂ.19-ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆ ಮೂಲಕ ಜಾರಿಗೊಳಿಸುವ ಆದೇಶ ವಾಪಸ್ ಪಡೆದು ಐಸಿಡಿಎಸ್ ಯೋಜನೆಯ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಲು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸವಾದಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಕನ್ನಡ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ 1008 ಸರ್ಕಾರಿ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಜಾರಿಗೊಳಿಸಲು ನಿರ್ಧರಿಸಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಶಿಕ್ಷಣ ಇಲಾಖೆ ಮೂಲಕ ಜಾರಿಗೊಳಿಸುವುದನ್ನು ಕೈಬಿಟ್ಟು ಐಸಿಡಿಎಸ್ ಯೋಜನೆಯ ಭಾಗವಾಗಿ ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಕಾರ್ಯದರ್ಶಿ ಮಂಡಳಿ ಸದಸ್ಯ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ, ರಾಜ್ಯ ಸಮಿತಿ ಸದಸ್ಯೆ ಶಾಂತಾ ಘಂಟಿ, ಜಿಲ್ಲಾ ಸಮಿತಿ ಸದಸ್ಯ ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಮುಖಂಡರಾದ ಎಂ.ಬಿ.ಸಜ್ಜನ್, ಮೇಘರಾಜ ಕಠಾರೆ, ಗೌರಮ್ಮ ಪಾಟೀಲ, ಸಾಯಬಣ್ಣಾ ಗುಡುಬಾ, ಶೇಖಮ್ಮ ಕುರಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.