ಡಾ.ಮೀನಾಕ್ಷಿ ಬಾಳಿ ಅವರಿಗೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ
ಕಲಬುರಗಿ,ಜೂ.19-ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರ ಕೊಡಮಾಡುವ 2024ನೇ ಸಾಲಿನ “ಯಶೋಧರಮ್ಮ ದಾಸಪ್ಪ ಪ್ರಶಸ್ತಿ”ಗೆ ಮಹಿಳಾ ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 15 ಸಾವಿರ ರೂ.ನಗದು ಮತ್ತು ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.
ಜೂ.25 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಮತ್ತು ಬಸವರಾಜ ಗಾರ್ಗಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಹಿರಿಯ ಪತ್ರಕರ್ತ ರಾಮಣ್ಣ ಎಸ್.ಕೋಡಿಹೊಸಹಳ್ಳಿ ಅಧ್ಯಕ್ಷತೆ ವಹಿಸುವರು.
ಡಾ.ಮೀನಾಕ್ಷಿ ಬಾಳಿ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸಮಾಜವಾದಿ ಚಿಂತನೆಗಳಿಂದ ಆಕರ್ಷಿತರಾಗಿ, ದುಡಿಯುವ ಜನರ ವಿಮೋಚನೆಗಾಗಿ ಜನಪರ ಜಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶೋಷಿತ, ದಲಿತ, ದಮನಿತರ ನೋವಿಗೆ ಮಿಡಿಯಲೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹತ್ತಾರು ಹೋರಾಟ ನಡೆಸಿದವರು. 2005ರಲ್ಲಿ ಹೆಣ್ಣು ಶಿಶು ಭ್ರೂಣಹತ್ಯೆ ವಿರೋಧಿ ಆಂದೋಲನವನ್ನು ಹುಟ್ಟು ಹಾಕಿ ರಾಜ್ಯಾದ್ಯಂತ ಸಂಚರಿಸಿ ಅರಿವು ಮೂಡಿಸಿದವರು. ಪ್ರಸ್ತುತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿದ್ದಾರೆ.