ಗುಡುಗು ಮಿಂಚಿನಿಂದ ಎಚ್ಚರದಿಂದಿರಿ: ಡಿವೈಎಸ್ಪಿ ಶಂಕರಗೌಡ
ವಾಡಿ:ಜೂ.19: ಮಳೆ ಬೀಳುವ ಸಮಯದಲ್ಲಿ ಮರದ ಕೆಳಗೆ ಹಾಗೂ ವಿದ್ಯುತ್ ಕಂಬದ ಹತ್ತಿರ ನಿಲ್ಲುವುದು ಜೀವಕ್ಕೆ ಅಪಾಯಕಾರಿಯಾಗಿದೆ. ಮುಂಗಾರಿನ ಮಳೆ ಅಬ್ಬರ ಜಾಸ್ತಿ ಇರುವುದರಿಂದ ಜಾಗರೂಕರಾಗಿರಿ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಸಲಹೆ ಮಾಡಿದ್ದಾರೆ.
ಹವಾಮಾನ ಇಲಾಖೆಯ ಮಾಹಿತಿ ಹಂಚಿಕೊಂಡಿರುವ ಅವರು, ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಒಳಭಾಗದಲ್ಲಿ ಪ್ರತ್ಯೇಕ ಸ್ಥಳಗಳಾದ ಕಲಬುರ್ಗಿ, ಗುರುಮಠಕಲ್, ಶಹಾಪುರ, ಯಾದಗಿರಿ ಹಾಗೂ ಬೀದರ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಗುಡುಗು ಮಿಂಚಿನ ಆರ್ಭಟ ಸಹ ಜಾಸ್ತಿ ಇದ್ದು, ಸಂಜೆ ವೇಳೆಗೆ ಬೇಗನೆ ಮನೆ ಸೇರಿಕೊಳ್ಳಬೇಕು. ಗುಡುಗು, ಮಿಂಚು ಸ್ಪರ್ಶಿಸುವ ಸಮಯದಲ್ಲಿ ವಿದ್ಯುತ್ ಸರಬರಾಜಿನ ಕಂಬ ಹಾಗೂ ಮರದ ಕೆಳಗೆ ಯಾವುದೇ ಕಾರಣಕ್ಕೂ ನಿಲ್ಲಬಾರದು. ಲಾಡ್ಲಾಪುರ ಗ್ರಾಮದಲ್ಲಿ ಈಚೇಗೆ ಮರದ ಕೆಳಗೆ ಆಸರೆ ಪಡೆದಿದ್ದ ಇಬ್ಬರೂ ಸಿಡಿಲಿನ ಹೊಡೆತಕ್ಕೆ ಜೀವ ಕಳೆದುಕೊಂಡಿದ್ದಾರೆ. ಈಗಾಗಲೇ ಗುಡುಗು ಮಿಂಚಿನ ಆರ್ಬಟ ರಾಜ್ಯದಲ್ಲಿ ಹಲವರು ಬಲಿಯಾಗಿದ್ದಾರೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.