ಯೋಗ ತರಬೇತಿ ಶಿಬಿರ ಉದ್ಘಾಟನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.19: ನಗರದ  ಶ್ರೀಮತಿ  ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ ಹಾಗೂ  ಪತಂಜಲಿ ಯೋಗ ಸಮಿತಿ ಬಳ್ಳಾರಿ ಘಟಕ ಇವರ ಸಹಯೋಗದಲ್ಲಿ  ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ. ಮರಿದೇವಯ್ಯ ರವರು ವಹಿಸಿಕೊಂಡಿದ್ದರು. ಜೂ.21 ರವರೆಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪತಾಂಜಲಿ ರಾಜ್ಯ ಸಮಿತಿ ಸದಸ್ಯರಾದ  ಪಂಪಾಪತಿ ಇಸ್ವಿ, ರಾಜೇಂದ್ರ ರೆಡ್ಡಿ, ಶ್ರೀಮತಿ ಜಯಂತಿ ಕುಲಕರ್ಣಿ, ಶ್ರೀಮತಿ ಪುಷ್ಪ ಭೂಪಾಲ್ ಇವರು ಭಾಗವಹಿಸಿದ್ದರು.  ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎ.ಎಂ ಕಾಳಮ್ಮ, IQAC ಸಂಯೋಜಕರಾದ ಡಾ. ಧೂಪಂ ಸತೀಶ್, ಹಾಗೂ ಬೋಧಕ ಸಿಬ್ಬಂದಿ ವರ್ಗದವರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪತಂಜಲಿ ರಾಜ್ಯ ಸಮಿತಿ ಸದಸ್ಯರಾದ ಇಸ್ವಿ ಪಂಪಾಪತಿ ಇವರು ಯೋಗ ಮಾಡುವುದರಿಂದ  ರಕ್ತ ಪರಿಚಲನೆ, ಉತ್ತಮ ಹೃದಯ ಬಡಿತ, ದೈಹಿಕ ಸಾಮರ್ಥ್ಯ, ಒತ್ತಡದಿಂದ ಮುಕ್ತಿ, ಸ್ನಾಯು ಬಲದ ಸುಧಾರಣೆ ಮುಂತಾದ ಅಂಶಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸುವುದರ ಮೂಲಕ ಮನವರಿಕೆ ಮಾಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ ಮರಿದೇವಯ್ಯರವರು ಯೋಗ ಕೇವಲ ತರಬೇತಿಗೆ ಮಾತ್ರ ಸೀಮಿತವಾಗಬಾರದು. ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ತಮ್ಮ ಅಧ್ಯಕ್ಷತೆ ನುಡಿಗಳ ಮೂಲಕ ತಿಳಿಸಿದರು. IQAC ಸಂಯೋಜಕರಾದ ಡಾ. ಧೂಪಂ ಸತೀಶ್ ರವರು ಯೋಗದಿಂದ ಏಕಾಗ್ರತೆ, ಆಲೋಚನಾ ಶಕ್ತಿಯನ್ನು  ಹೆಚ್ಚಿಸಿಕೊಳ್ಳಬಹುದು. ಯೋಗದ ಮೂಲಕ ಹಲವಾರು ರೋಗ-ರುಜಿನಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸು. 90ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.