ಇಂಧನ ಧರ ಏರಿಕೆ ಖಂಡಿಸಿ ಎಸ್.ಯು.ಸಿ.ಐ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.19: ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಹೆಚ್ಚಳದ ವಿರುದ್ಧ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ತಾಲೂಕು ಆಫೀಸ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿತು.
 ಪ್ರತಿಭಟನೆಯನ್ನುದ್ದೇಶಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎ. ದೇವದಾಸ್ ಮಾತನಾಡುತ್ತಾ “ಚುನಾವಣೆಗಳು ಮುಗಿಯುತ್ತಿದ್ದಂತೆ  ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರಿಗೆ ತಲಾ ರೂ. 3 ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ. ಪೆಟ್ರೋಲ್ , ಡೀಸೆಲ್ ಬೆಲೆ ಹೆಚ್ಚಳವಾಗುವುದರಿಂದ ಎಲ್ಲಾ ಸರಕು ಸಾಗಣೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರ ಮೇಲೆ ಮತ್ತೆ ತೆರಿಗೆ ಹಾಕಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಇದೊಂದು ಜನ ವಿರೋಧಿ ನಡೆಯಾಗಿದೆ.
ನಿರುದ್ಯೋಗ ಸಮಸ್ಯೆಯಿಂದಾಗಿ ಕೈಯಲ್ಲಿ ಕಾಸಿಲ್ಲದೆ ಜನ ಸಾಮಾನ್ಯರ ಕೊಂಡುಕೊಳ್ಳುವ ಸಾಮರ್ಥ್ಯ ದಿನದಿಂದ ದಿನಕ್ಕೆ ಕುಸಿದು ಹೋಗುತ್ತಿದೆ. ಎರಡು ಒಪ್ಪತ್ತಿನ ಊಟಕ್ಕೂ ಕೂಡ ಪರದಾಡುವಂತಹ ಪರಿಸ್ಥಿತಿಗೆ ಜನಸಾಮಾನ್ಯರು ತಳ್ಳಲ್ಪಡುತ್ತಿದ್ದಾರೆ. ಗ್ಯಾರಂಟಿಗಳ ಮೂಲಕ ಜನಸಾಮಾನ್ಯರ ಬದುಕು ಹಸನು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅದೇ ಜನಗಳ ಮೇಲೆ ತೆರಿಗೆಯ ಭಾರ ಹೊರಿಸುತ್ತಿದೆ. ಒಂದು ಕಡೆ ಕೊಟ್ಟು ಇನ್ನೊಂದು ಕಡೆ ಕಸಿದುಕೊಳ್ಳುವ ರಾಜ್ಯ ಸರ್ಕಾರದ ಈ ನೀತಿಯ ವಿರುದ್ಧ ಜನಸಾಮಾನ್ಯರು ಧ್ವನಿ ಎತ್ತಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯರಾದ ಎಂ.ಎನ್.ಮಂಜುಳಾ ಮಾತನಾಡುತ್ತಾ “ಈಗಾಗಲೇ ಪ್ರತಿ ಲೀಟರ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ತೆರಿಗೆಯೇ ಇದೆ. ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಕೇಂದ್ರ ಬಿಜೆಪಿ ಸರ್ಕಾರವು ಮತದಾರರನ್ನು ಓಲೈಸಲು 2ರೂ. ಕಡಿತ ಮಾಡಿತ್ತು. ರಷ್ಯಾ – ಉಕ್ರೇನ್ ಯುದ್ಧದ ಲಾಭ ಪಡೆದು ಭಾರತ ಸರ್ಕಾರವು ಜಾಗತಿಕ ದರಕ್ಕಿಂತ ಸುಮಾರು ಶೇ. 35ರಷ್ಟು ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿ ಮಾಡಿದರೂ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಲಕ್ಷಾಂತರ ಕೋಟಿ ರೂಪಾಯಿಗಳನ್ನು ಭಾರತದ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ.
ಇನ್ನೊಂದೆಡೆ ಒಂದು ದೇಶ- ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆಗಳನ್ನು ಹೇರುತ್ತಿವೆ.
ಅದೇ ದಾರಿಯಲ್ಲಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡ ಈ ಜನವಿರೋಧಿ ತೀರ್ಮಾನವನ್ನು ಕೈಗೊಂಡಿದೆ. ಬೆಲೆ ಏರಿಕೆಯ ವಿರುದ್ಧ ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಈ ಕ್ರಮವು ತಮಗೆ ಮಾಡಿದ ವಂಚನೆಯೆಂದು ಜನತೆ ಭಾವಿಸುತ್ತಾರೆ. ಆದ್ದರಿಂದ ಜನರ ಮೇಲಿನ ಈ ಬೆಲೆ ಏರಿಕೆಯ ಹೊಡೆತವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿದರು.
ಜಿಲ್ಲಾ ಸಮಿತಿ ಸದಸ್ಯರಾದ ಕಾಮ್ರೆಡ್ ಡಾಕ್ಟರ್ ಎನ್ ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.