ಡೆಂಗ್ಯೂ ಅರಿವು ಕಾರ್ಯಕ್ರಮ
ಧಾರವಾಡ,ಜೂ19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಧಾರವಾಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಆರೋಗ್ಯಾಧಿಕಾರಿಳ ಕಚೇರಿ ಹಾಗೂ ಮಹಿಳಾ ವಿದ್ಯಾಪೀಠ ಬಾಲಕೀಯರ ಪದವಿಪೂರ್ವ ಕಾಲೇಜು, ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಡೆಂಗ್ಯೂ, ಚಿಕುನಗುನ್ಯಾ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ ಮುಂಡರಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ವಿವರಿಸಿದರು.
ಡೆಂಗ್ಯೂ ಮತ್ತು ಚಿಕುನಗುನ್ಯಾ ಕಾಯಿಲೆಗಳನ್ನು ತಡೆಗಟ್ಟಬಹುದು ಇವುಗಳ ನಿಯಂತ್ರಣ ನಿಮ್ಮ ಕೈಯಲ್ಲಿದೆ. ತೀವ್ರ ಜ್ವರ, ಮೈ ಕೈ ನೋವು ಮತ್ತು ಕೀಲು ನೋವು ತೀವ್ರತರವಾದ ತಲೆನೋವು ಹೆಚ್ಚಾಗಿ ಹಣೆಯ ಮುಂಭಾಗ, ಕಣ್ಣಿನ ಹಿಂಭಾಗದ ನೋವು, ವಾಕರಿಕೆ ಮತ್ತು ವಾಂತಿ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ತಕ್ಷಣ ಸಂಪರ್ಕಿಸಿ ಉಚಿತ ಚಿಕಿತ್ಸೆ ಪಡೆಯಿರಿ ಎಂದು ಹೆಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಆರ್. ಪಾತ್ರೋಟ ಅವರು ಮಾತನಾಡಿ, ನೀರಿನ ತೊಟ್ಟಿಗಳು, ಡ್ರಮ್, ಬ್ಯಾರಲ್ ಮತ್ತು ಟ್ಯಾಂಕಗಳನ್ನು ಕನಿಷ್ಠ ವಾರಕ್ಕೆ ಒಂದು ಸಲ ಆದರು ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡಿ. ಟೈಯರಗಳಲ್ಲಿ ನಿಂತ ಮಳೆ ನೀರು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡಿ, ಏರಕೂಲರ್, ಹೂವಿನ ಕುಂಡ, ಫೈರ್ ಬಕೆಟ್ ಇತ್ಯಾದಿಗಳನ್ನು ಪ್ರತಿ ವಾರ ಖಾಲಿ ಮಾಡಿ ಒಣಗಿಸಿ ಭರ್ತಿ ಮಾಡಿ. ಹಗಲಿನಲ್ಲಿ ನಿದ್ದೆ ಅಥವಾ ವಿಶ್ರಾಂತಿ ಪಡೆಯುವವರು ಸೊಳ್ಳೆ ಪರದೆ ಹಾಗೂ ಸೊಳ್ಳೆ ಬತ್ತಿಗಳನ್ನು ತಪ್ಪದೇ ಬಳಸಿ ಎಂದು ತಿಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯತು. ಆರ್.ಬಿ. ಗಂಗೂರ ಅವರು ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ದೊಡ್ಡಬಸವಣ್ಣನವರ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು, ಹಿರಿಯ ಮಹಿಳಾ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.