ಕುಡಿಯುವ ನೀರಿನ ದರ ಏರಿಕೆ ಅನಿವಾರ್‍ಯ: ಡಿಕೆಶಿ
ಬೆಂಗಳೂರು, ಜೂ. ೧೯- ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ ಎಂಬ ದಾಟಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿದ್ದು, ನೀರಿನ ದರ ಏರಿಕೆಯಾಗುವುದು ನಿಶ್ಚಿತ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಜಲಮಂಡಳಿ ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಿಲ್ಲ. ಮಂಡಳಿ ನಷ್ಟದಲ್ಲಿದೆ. ಮಂಡಳಿಯನ್ನು ಸರಿದಾರಿಗೆ ತರಲು ಕುಡಿಯುವ ನೀರಿನ ದರ ಏರಿಕೆ ಅನಿವಾರ್ಯ ಎಂದರು.
ಕುಡಿಯುವ ನೀರಿನ ದರವನ್ನು ಎಷ್ಟು ಏರಿಕೆ ಮಾಡಬೇಕು, ಯಾವಾಗಿನಿಂದ ದರ ಏರಿಕೆ ಜಾರಿ ಮಾಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಚರ್ಚಿಸಿ ಒಂದು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ. ಅಂತಿಮವಾಗಿ ದರ ಏರಿಕೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಬೆಂಗಳೂರು ಜಲಮಂಡಳಿ ನಷ್ಟದಲ್ಲಿರುವುದರಿಂದ ಯಾವುದೇ ಹಣಕಾಸು ಸಂಸ್ಥೆಗಳಿಂದ ಹೊಸ ಯೋಜನೆಗಳಿಗೆ ಸಾಲ ಪಡೆಯುವುದು ಕಷ್ಟವಾಗಿದೆ. ಆರ್ಥಿಕ ಕೊರತೆಯಿಂದ ಹೊಸ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗಿಲ್ಲ. ಹಾಗಾಗಿ ಸ್ವಲ್ಪಮಟ್ಟಿಗೆ ಕುಡಿಯುವ ನೀರಿನ ದರ ಏರಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಬೆಂಗಳೂರು ಜಲಮಂಡಳಿ ಕುಡಿಯುವ ನೀರಿಗಾಗಿ ವಸೂಲಿ ಮಾಡುವ ಹಣದಲ್ಲಿ ಶೇ. ೭೦ ರಷ್ಟು ಹಣ ವಿದ್ಯುತ್ ಬಿಲ್‌ಗೆ ಹೋಗುತ್ತದೆ. ಕಳೆದ ೧೦ ವರ್ಷದಲ್ಲಿ ವಿದ್ಯುತ್ ದರವೂ ಏರಿಕೆಯಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ದರ ಏರಿಕೆ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಕಾವೇರಿ ೫ನೇ ಹಂತದ ಯೋಜನೆಯು ಅಂತಿಮ ಹಂತದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆ ಸಂಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.