ಪ್ರತಿ ಮಗುವಿನ ಮುಖದಲ್ಲಿ ನಗು ಅರಳಿಸುವುದೇ ನಮ್ಮ ಧ್ಯೇಯ:ಸಂಗಮೇಶ ಬಬಲೇಶ್ವರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.19:ಕಲುಷಿತ ವಾತಾವರಣ ಸ್ವಾರ್ಥಮಯ ಪರಿಸರದಿಂದ ಭೌದ್ಧಿಕವಾಗಿ ಕುಬ್ಜರಾಗುತ್ತಿರುವ ಮಕ್ಕಳನ್ನು ವಿಶ್ವಮಾನವರನ್ನಾಗಿಸುವ ಜವಾಬ್ಧಾರಿ ಎಲ್ಲರ ಮೇಲಿದೆ. ಯಾವುದೇ ಮಗು ಅನಾಥ ಪ್ರಜ್ಞೆಯಿಂದ ಬಳಲಬಾರದು. ಬಾಲ್ಯದಲ್ಲಿಯೇ ಮಾತಾಪಿತರನ್ನು ಕಳೆದುಕೊಂಡು ನಾನು ಓಣಿಯ ತಾಯಂದಿರಲ್ಲಿ ಅಮ್ಮಅಪ್ಪಂದಿರನ್ನು ಕಂಡಿದ್ದೇನೆ. ಎಷ್ಟೇಎತ್ತರಕ್ಕೆ ಬೆಳೆದರೂ ಕೂಡಾ ಯಾರೂ ತಮ್ಮ ಬಾಲ್ಯವನ್ನು ಮರೆಯಲಾರರು. ಬಾಲ್ಯಾವಸ್ಥೆ ಎನ್ನುವುದು ಬಾಳಗ್ರಂಥದಲ್ಲಿ ಸುಂದರ ಪುಟವಿದ್ದಂತೆ. ಮಕ್ಕಳ ಸೇವೆಯೇ ಭಗವಂತನ ಸೇವೆ. ಅಂತಹ ಸೇವಾ ಭಾಗ್ಯವನ್ನು ಪಡೆದ ನಾನು ಬಾಲ ವಿಕಾಸ ಅಕಾಡೆಮಿಯ ಮೂಲಕ ಪ್ರತಿ ಮಗುವಿನ ಮುಖದ ಮೇಲೆ ಮಂದಸ್ಮಿತ ಮೂಡಿಸಲು ಸದಾ ಶ್ರಮಿಸುವೆ ಎಂದು ಬಾಲ ವಿಕಾಸ ಅಕಾಡೆವಿಯ ನೂತನ ಅಧ್ಯಕ್ಷÀ ಸಂಗಮೇಶ ಬಬಲೇಶ್ವರ ಹೇಳಿದರು.
ವಿಜಯಪುರ ನಗರದ ಕೆ.ಎಸ್.ಆರ್.ಟಿ.ಸಿ ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಮಕ್ಕಳ ಸೇವಾ ಭಾಗ್ಯ ಎನ್ನುವುದು ದೇವರ ಪೂಜೆ ಇದ್ದಂತೆ. ಇದು ನನಗೆ ಬಯಸಿ ಬಂದ ಭಾಗ್ಯವಾಗಿದೆ. ಯಾವುದೇ ಮಗುವಿನ ವರ್ತನೆಯಿಂದ ತಂದೆತಾಯಿಯರು ತಲೆತಗ್ಗಿಸುವಂತಾಗಬಾರದು ಬದಲಿಗೆ ಮಕ್ಕಳು ಪಾಲಕರು ತಲೆ ಎತ್ತಿ ಬೀಗುವಂತೆ ಸಾಧನೆ ಮಾಡಬೇಕು. ಜಗತ್ತಿನ ಯಾವ ಸಂಪತ್ತು ಕೂಡಾ ಮಗುವಿನ ಮುಗ್ದ ನಗುವಿಗೆ ಸಮವಾಗಲಾರದು. ಅಂತಹ ಮಕ್ಕಳನ್ನು ದ್ವೇಷ, ಅಸೂಯೆ, ಜಾತಿಯತೆ ಎಂಬ ಕಬಂಧ ಬಾಹುಗಳು ಆವರಿಸುವ ಮುನ್ನ ಅವರ ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತೋಣ. ನಾನು ಕೂಡಾ ಎಕ್ಸಲಂಟ್ ಸಂಸ್ಥೆಯ ವಿದ್ಯಾರ್ಥಿ ಹಾಗೂ ಬಸವರಾಜ ಕೌಲಗಿ ಗುರುಗಳ ಶಿಷ್ಯ ಎಂಬ ಹೆಮ್ಮೆ ನನ್ನದಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ನಿವೃತ್ತ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕøತ ಚಂದ್ರಶೇಖರಯ್ಯ ಹಿರೇಮಠ ಮಾತನಾಡಿ, ಬಾಲ್ಯದಲ್ಲಿಯೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸಂಗಮೇಶ ಬಬಲೇಶ್ವರ ಉನ್ನತ ಸರ್ಕಾರಿ ನೌಕರಿ ಪಡೆಯಬಹುದಾಗಿತ್ತು. ಅದನ್ನು ಬದಿಗಿರಿಸಿ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸರ್ವರ ಮನ ಗೆದ್ದವರು. ಅವರು ಬಾಲ್ಯದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯ ಎದುರಿಸಿದರೂ ಕೂಡಾ ಜೀವನ ಪ್ರೀತಿ ಕಳೆದುಕೊಳ್ಳಲಿಲ್ಲ. ಅವರ ನಿಸ್ವಾರ್ಥ ಸೇವೆಯ ಫಲವೇ ಇಂದು ಬಾಲ ಅಕಾಡೆಮಿಯ ಅಧ್ಯಕ್ಷತೆ ದೊರೆತದ್ದು ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ತಮ್ಮ ವಿದ್ಯಾರ್ಥಿಯ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು.
ಮುಖ್ಯ ಅತಿಥಿಗಳಾದ ವಿ.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ವಿ.ಡಿ. ಮಾದನಶೆಟ್ಟಿ ಮಾತನಾಡಿ, ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯ ಧಾರವಾಡದಲ್ಲಿ ಇರುವ ಬಾಲ ವಿಕಾಸ ಅಕಾಡೆಮಿ ಮಾಡುತ್ತಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಪ್ರತಿ ಜಿಲ್ಲೆಗಳಲ್ಲೂ ಮಕ್ಕಳ ಉತ್ಸಾಹವನ್ನು ಹೆಚ್ಚಿಸುª ಕಾರ್ಯವನ್ನು ಸಂಗಮೇಶ ಅವರು ಖಂಡಿತಾ ಮಾಡುತ್ತಾರೆ. ಮಕ್ಕಳಲ್ಲಿ ಸಾಹಿತ್ಯ ಶಿಕ್ಷಣ, ಅವರ ಹಕ್ಕು ರಕ್ಷಣೆ ಹಾಗೂ ಅವರಲ್ಲಿ£ Àಕಲೆಯ ಪ್ರೀತಿ ಹೆಚ್ಚಿಸಿ ಮಕ್ಕಳ ಕನಸನ್ನು ನನಸಾಗಿಸಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಾಲಕರ ಸರಕಾರಿ ಕಾಲೇಜಿನ ಉಪನ್ಯಾಸಕ ಶಿವಾನಂದ ಕಲ್ಯಾಣಿ ಅವರು, ಸಂಗಮೇಶರವರು ಬೇರೆ ಅಕಾಡೆಮಿ ಇಲ್ಲವೇ ನಿಗಮ, ಮಂಡಳಿ ಪಡೆಯಬಹುದಾಗಿತ್ತು. ಆದರೆ ಅವರು ಇಷ್ಟ ಪಡುವ ಕ್ಷೇತ್ರವೆಂದರೆ ಮಕ್ಕಳ ಲೋಕ. ಹೀಗಾಗಿ ತಾವು ಕಲಿತ ಸಂಸ್ಥೆಯಲ್ಲಿಯೇ ಸನ್ಮಾನಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಕೌಲಗಿ, ಬಾಲ್ಯ ಸುಮಧುರವಾಗಿದ್ದರೆ ಬದುಕು ಸುಂದರವಾಗುತ್ತದೆ. ಆಸಕ್ತಿ ಇರುವ ಕ್ಷೇತ್ರದಲ್ಲಿ ಸೇವಾ ಭಾಗ್ಯ ದೊರೆಯುವುದು ಯೋಗಾಯೋಗ. ಕಲಾಂ ಅವರು ಉನ್ನತ ಸ್ಥಾನದಲ್ಲಿದ್ದರೂ ಕೂಡಾ ಮಕ್ಕಳ ಮೇಲೆ ಅದಮ್ಯ ಪ್ರೀತಿಇಟ್ಟುಕೊಂಡಿದ್ದರು. ಹಾಗೆ ಸಂಗಮೇಶರವರು ಕೂಡಾ ಮಕ್ಕಳ ಒಳತಿಗಾಗಿ ಕಾರ್ಯ ನಿರಂತರವಾಗಿ ಮಾಡುತ್ತಲೆ ಇದ್ದಾರೆ. ಚಟುವಟಿಕೆ ಚಿಲುಮೆಯಾದ ಅವರಿಗೆ ಅಕಾಡೆಮಿಯ ಅಧ್ಯಕ್ಷ ಸ್ಥಾನ ಲಭಿಸಿರುವುದು ಅರ್ಥಪೂರ್ಣವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಆಶಿಸಿದರು.
ಕುಮಾರಿ ಆಕಾಂಕ್ಷಾ ಬಿ. ಪ್ರಾರ್ಥಿಸಿದಳು. ಪ್ರಾಚಾರ್ಯ ಶ್ರೀಕಾಂತ ಕೆ.ಎಸ್. ಸ್ವಾಗತಿಸಿದರು. ಉಪನ್ಯಾಸಕ ಎಸ್. ಆರ್. ಪಾಟೀಲ ನಿರೂಪಿಸಿದರು. ರಮೇಶ ಬಾಗೇವಾಡಿ ವಂದಿಸಿದರು. ಸಮಾರಂಭದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದರು.