27ರಂದು ಕೆಂಪೇಗೌಡರ ಜಯಂತಿ ಪೂರ್ವಭಾವಿ ಸಭೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.19: ರಾಜ್ಯ ಸರ್ಕಾರದ ನಿರ್ದೇಶನದಂತೆ ಜೂನ್ 27 ರಂದು ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ಆಚರಿಸಲು ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿ ನಿರ್ಧರಿಸಿತು.
ಕೆಂಪೇಗೌಡರ ಜಯಂತಿ ಆಚರಣೆಯ ಸಂಬಂಧ ಶಾಸಕ ಹೆಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರ ಸಭೆ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆಯಿತು.
ಸರ್ಕಾರಿ ನಿಯಮಗಳಿಗೆ ಧಕ್ಕೆಯಾಗದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಸರ್ವ ಜನಾಂಗಗಳ ಸಮ್ಮಿಲನದ ಕಾರ್ಯಕ್ರಮವನ್ನಾಗಿ ಕೆಂಪೇಗೌಡರ ಜಯಂತಿಯನ್ನು ರೂಪಿಸುವಂತೆ ಸಲಹೆ ನೀಡಿದ ಶಾಸಕ ಹೆಚ್.ಟಿ.ಮಂಜು ನಾಡಪ್ರಭು ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಲ್ಲ. ಸರ್ವ ಜನಾಂಗಗಳ ಹಿತರಕ್ಷಣೆಗಾಗಿಯೇ ಹಲವು ಪೇಟೆಗಳನ್ನು ನಿರ್ಮಿಸಿ ತಮ್ಮ ಕನಸಿನ ಬೆಂಗಳೂರು ನಿರ್ಮಿಸಿದವರು ಕೆಂಪೇಗೌಡರು. ಇದನ್ನು ಗಮನದಲ್ಲಿಟ್ಟುಕೊಂಡು ಕೆಂಪೇಗೌಡರ ಜಯಂತಿಯನ್ನು ಸರ್ವ ಜನರ ಜಯಂತಿಯನ್ನಾಗಿಸುವಂತೆ ಸಲಹೆ ನೀಡಿದರು.
ತಾಲೂಕು ಆಡಳಿತ ಸೌಧದ ಹೊರ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಕಾರ್ಯಕ್ರಮ ನಡೆಸಲು ಸಭೆ ನಿರ್ಧರಿಸಿತು. ಕೆಂಪೇಗೌಡರ ಜಯಂತಿಯ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಎಲ್ಲರೂ ಸಮ್ಮಿಲಗೊಳ್ಳಲು ನಿರ್ಧರಿಸಲಾಯಿತು.
ತಹಸೀಲ್ದಾರ್ ನಿಸರ್ಗಪ್ರಿಯ, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಲಿಯ ನಿರ್ದೇಶಕ ಶೀಳನೆರೆ ಮೋಹನ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಎಸ್.ಶಿವರಾಮೇಗೌಡ, ಯುವ ಒಕ್ಕಲಿಗರ ಸಂಘಟನೆಯ ಅಧ್ಯಕ್ಷ ಮಹದೇವೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನ ಮುಖಂಡರು ಸಭೆಯಲ್ಲಿದ್ದರು.