ಬರವಣಿಗೆಯಿಂದ ಆಲೋಚನೆ ತೀಕ್ಷ್ಣ : ಕುಮಾರ್
ಬೆಂಗಳೂರು.ಜೂ.೧೮- ಬರವಣಿಗೆ ನಮ್ಮ ಆಲೋಚನೆಗಳನ್ನು ತೀಕ್ಷ್ಣಗೊಳಿಸುತ್ತದೆ ಆದರೆ ಭಾಷೆಯ ಮೇಲೆ ಹಿಡಿತ ಬಂದಾಗ ಬರವಣಿಗೆ ಸಾಧ್ಯವಾಗುತ್ತದೆ ಹಾಗೂ ಭಾಷೆಯ ಸ್ಪಷ್ಟತೆಯು ಆಲೋಚನೆಯಲ್ಲಿಯೂ ಸ್ಪಷ್ಟತೆಯನ್ನು ತರುತ್ತದೆ ಎಂದು ಎಐಡಿವೈಓನ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಎಸ್. ಕುಮಾರ್ ಹೇಳಿದರು.
ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡಿದ್ದ ಎರಡು ದಿನಗಳ ಬರಹಗಾರರ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಬರಹಗಾರರೆಲ್ಲ ಆಸಕ್ತಿಯಿಂದ ಭಾಗವಹಿಸಿರುವುದೇ ಕಮ್ಮಟದ ಯಶಸ್ಸಿಗೆ ಕಾರಣವಾಗಿದೆ. ಇದರ ಹಿಂದೆ ತುಂಬಾ ದಿನಗಳ ಪ್ರಯತ್ನವಿದೆ. ಆದ್ದರಿಂದ ಬರೆಯುವ ಆಸಕ್ತಿಯನ್ನು ಜೀವಂತವಾಗಿ ಇಟ್ಟುಕೊಳ್ಳಿ. ಮನಸ್ಸಿಗೆ ಖುಷಿ ಕೊಡುವ ಸಾಹಿತ್ಯವನ್ನು ಆಸಕ್ತಿಯಿಂದ ಓದಬೇಕು, ನಮ್ಮ ಉದ್ದೇಶವನ್ನು ಸಾಧಿಸಲು ನಾವು ಗಂಭೀರವಾಗಿ ಪ್ರಯತ್ನಿಸಬೇಕು ಎಂದರು.
ಕಮ್ಮಟದಲ್ಲಿ ಭಾಗವಹಿಸಿದ್ದವರೆಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಬರವಣಿಗೆಯ ಆಳ-ಅಗಲ ಅರಿತೆವು. ಬರೆಯುವ ಭರವಸೆ ಬಂದಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಐಡಿವೈಓನ ರಾಜ್ಯ ಕಾರ್ಯದರ್ಶಿಗಳಾದ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಕಮ್ಮಟದ ಯಶಸ್ಸಿಗಾಗಿ ಎಲ್ಲ ರೀತಿಯ ಸಹಾಯ-ಸಹಕಾರ ನೀಡಿದ ಬೆಂಬಲಿಗರಿಗೆ ಹಾಗೂ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಬೆಂಗಳೂರಿನ ಸಂಘಟಕರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ರಾಜ್ಯ ಉಪಾಧ್ಯಕ್ಷರುಗಳಾದ ಚನ್ನಬಸವ ಜಾನೆಕಲ್, ವಿನಯ್ ಸಾರಥಿ, ವಿಜಯ್ ಕುಮಾರ್, ಕೃಷ್ಣ ಬೆಂಗಳೂರು ಉಪಸ್ಥಿತರಿದ್ದರು.