ಕೃಷಿ ಸಾಹಿತ್ಯದಿಂದ ರೈತರಿಗೆ ಉಪಯುಕ್ತ ಮಾಹಿತಿ: ಧಂಗಾಪೂರ
ಕಲಬುರಗಿ,ಜೂ.18-ಕೃಷಿ ಸಾಹಿತ್ಯ ಹೆಚ್ಚಾಗಿ ಬೆಳೆದು ಬಂದಾಗ ರೈತರಿಗೆ ಉಪಯುಕ್ತ ಮಾಹಿತಿ ದೊರೆಯಬಲ್ಲದು. ಈ ದಿಸೆಯಲ್ಲಿ ಮುಂಗಾರು ಮಳೆ ಬಂಗಾರ ಬೆಳೆ ಸೃಷ್ಠಿಯಾಗುತ್ತದೆ ಎಂದು ಜಿಲ್ಲಾ ಕೃಷಿಕ
ಸಮಾಜದ ಅಧ್ಯಕ್ಷ ಸಿದ್ರಾಮಪ್ಪಾ ಪಾಟೀಲ ಧಂಗಾಪೂರ ಅಭಿಪ್ರಾಯಪಟ್ಟರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಸೋಮವಾರ ಏರ್ಪಡಿಸಿದ ಕವಿಮೇಳ ಕಾವ್ಯಮಳೆ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾವಯವ ಕೃಷಿ ಬಳಕೆಯಾಗಬೇಕು. ಆ ಮೂಲಕ ಸಮೃದ್ಧಿ ಬೆಳೆ ಇಮ್ಮಡಿಗೊಳಿಸಲು ಸಾಧ್ಯ. ಕೃಷಿಗೈಯ್ಯುವ ವಾತಾವರಣ ಜನರಲ್ಲಿ ಬರಬೇಕಾಗಿದೆ. ಇಂಥ ವಿಚಾರಗಳು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದ ಅವರು, ಬರುವ
ದಿನಗಳಲ್ಲಿ ಜಿಲ್ಲಾ ಕೃಷಿ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು. ಕೃಷಿ ಸಾಹಿತ್ಯ ಬದುಕು ಕಟ್ಟಿಕೊಡುತ್ತದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬರುವ ಅಗಷ್ಟ್ ತಿಂಗಳಲ್ಲಿ ಜಿಲ್ಲಾ ಮಟ್ಟದ ಕೃಷಿ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಕೃಷಿಯ ಕುರಿತಾದ ಅರ್ಥಪೂರ್ಣ ಚಿಂತನೆಗಳು ರೈತಾಪಿ ವರ್ಗಕ್ಕೆ ತಲುಪಿಸುವ ಉದ್ದೇಶ ಹೊಂದಲಾಗತಿದೆ. ಎಲ್ಲರ ಸಹಕಾರ ಪಡೆದುಕೊಂಡು ಸಮ್ಮೇಳನ ಮಾಡಲಾಗುತ್ತದೆ ಎಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಎಸ್ ಸಜ್ಜನಶೆಟ್ಟಿ ಮಾತನಾಡಿ, ಕೃಷಿ ಕ್ಷೇತ್ರದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ. ರೈತ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹಾಗಾಗಿ, ಕೃಷಿ
ಕ್ಷೇತ್ರದ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ಪರಿಷತ್ತು ಸದಾ ಕ್ರಿಯಾಶೀಲವಾಗಿರುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಕಲ್ಲಿನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಹೈನು ಮಹಾವಿದ್ಯಾಲಯದ ಪ್ರಾಧ್ಯಾಪಕ ಮಲ್ಲಿನಾಥ ಹೆಮಾಡಿ, ವಿಶಾಲಾಕ್ಷಿ ಮಾಯಣ್ಣವರ್, ಕುಪೇಂದ್ರ ಬರಗಾಲಿ ವೇದಿಕೆ ಮೇಲಿದ್ದರು.
ಪ್ರಮುಖರಾದ ಪ್ರಭವ ಪಟ್ಟಣಕರ್, ಮಲ್ಲಿಕಾರ್ಜುನ ಇಬ್ರಾಹಿಂಪುರ, ರೇವಯ್ಯಾಸ್ವಾಮಿ ಸರಡಗಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಧರ್ಮರಾಜ ಜವಳಿ, ರವೀಂದ್ರಕುಮಾರ ಭಂಟನಳ್ಳಿ, ಎಂ.ಎನ್. ಸುಗಂಧಿ, ಶಾಮಸುಂದರ ಕುಲಕರ್ಣಿ, ವೆಂಕುಬಾಯಿ ರಜಪೂತ, ಕವಿತಾ ಮೋರಾ, ಬಸಮ್ಮ ಸಜ್ಜನ್, ಸಿದ್ಧಲಿಂಗ ಜಿ ಬಾಳಿ, ಅರುಣ ಪಾಟೀಲ ಡಬರಾಬಾದ, ಸಂಜೀವ ಕುಲಕರ್ಣಿ, ಶಿವಶರಣ ಹಡಪದ, ರಾಜೇಂದ್ರ ಮಾಡಬೂಳ, ಸಂಧ್ಯಾ ಕುಲಕರ್ಣಿ, ಅನುಪಮಾ ಅಪಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಅನೇಕ ಕವಿಗಳು ಮಳೆ, ರೈತರ ಸಮಸ್ಯೆ, ರೈತರ ಬದುಕು ಕುರಿತು ಕವನ ವಾಚಿಸಿದರು. ಧರೆಗೆ ಬಂದು ನೀರಿನ ದಾಹ ತೀರಿಸು ಮಳೆರಾಯ, ರೈತ ಕಂಗಾಲಾಗಿತದ್ದಾನೆ ನೀ ಬಂದು ಅವರ ಕೈ ಹಿಡಿ ಎಂದು ಕವಿಗಳು ಪ್ರಾರ್ಥನೆ ಮಾಡಿದರು.