ಸಂಭ್ರಮದ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ
ಹುಮನಾಬಾದ :ಜೂ.18: ತಾಲೂಕಿನ ಕಠಳ್ಳಿ ಗ್ರಾಮದ ಆರಾಧ್ಯ ದೈವ ಐತಿಹಾಸಿಕ ಬೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ನೆರದ ಸಾವಿರಾರು ಭಕ್ತರ ಮಧ್ಯೆ ದೇವರ ಪಲ್ಲಕ್ಕಿ ಉತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವದ ಹಿನ್ನಲೆ ಎರಡು ದಿನಗಳ ಕಾಲ ಗಂಗಾಸ್ನಾನ, ಭಂಡಾರ ಪೂಜೆ, ಕ್ಷೀರಾಭಿಷೇಕ, ಜಲಾಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ದೀಪಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನದಂತೆ ಜರುಗಿದವು.
ಜಾತ್ರೆಯ ಪ್ರಯುಕ್ತ ಬೀರಲಿಂಗೇಶ್ವರ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರು, ಯುವತಿಯರು ಕುಂಭ, ಕಳಸದೊಂದಿಗೆ ದೇವಸ್ಥಾನದಿಂದ ಗ್ರಾಮದ ಐತಿಹಾಸಿಕ ಕೆರೆಗೆ ತೆರಳಿ ಗಂಗೆಸ್ಥಳ ಪೂಜೆ ನೆರವೇರಿಸಿದರು. ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹುಮನಾಬಾದ್ ಶಾಸಕ ಡಾ. ಸಿದ್ದು ಪಾಟೀಲ್ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಕಾಯಿ ಕರ್ಪೂರ ಅರ್ಪಿಸಿ ದರ್ಶನ ಪಡೆದರು.
ಹನುಮಾನ ಮಂದಿರ, ಲಕ್ಷ್ಮಿ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ,ಬೋಮ್ಮಗೊಂಡೇಶ್ವರ ವೃತ್ತ, ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಸೇರಿದಂತೆ ಗ್ರಾಮ ಪ್ರಮುಖ ರಸ್ತೆಗಳ ಮಾರ್ಗದಲ್ಲಿ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡಯಿತು. ಈ ಮೆರವಣಿಗೆ ದಾರಿಯುದ್ದಕ್ಕೂ ಡೊಳ್ಳು ಕುಣಿತ ಸೇರಿ ವಿವಿಧ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.
ಈ ಸಂದರ್ಭದಲ್ಲಿ ಗ್ರಾಪಂ. ಸದಸ್ಯರಾದ ವೀರಭದ್ರಪ್ಪ ಪಾಟೀಲ್, ಅಮೃತ ಮರಕುಂದಿ, ಪಿಡಿಒ ವೀರಣ್ಣ ಜಮಾದಾರ, ಪ್ರಮುಖರಾದ ಗುಂಡಪ್ಪ ಭೂಯಾರ್, ಸಿದ್ದಪ್ಪ ಚಾಂಗಲೇರಿ, ಶ್ರೀನಿವಾಸ ಪೂಜಾರಿ, ಅಮೃತ ಚಾಂಗಲೇರಿ, ಬಸವರಾಜ ಚಾಂಗಲೇರಿ, ಸಂಜುಕುಮಾರ ಮರಕುಂದಿ, ಹಣಮಂತ ಚಾಂಗಲೇರಿ, ರಾಮಣ್ಣ ಪೂಜಾರಿ, ಜಗನಾಥ ಮಜಗೆ, ತಮ್ಮಣ್ಣಪ್ಪ ಪೂಜಾರಿ,ನಾಗೇಶ ದೊಡ್ಡಮನಿ , ಶಿವು ಚಾಂಗಲೇರಿ, ಅಕ್ಷಯ ಪೂಜಾರಿ, ಶಿವಶರಣಪ್ಪ ಟೆಂಗಳಿ, ಸಂಜುಕುಮಾರ ಜಮಾದಾರ, ರಮೇಶ್ ಪೂಜಾರಿ, ಲೋಕೇಶ ಜಮಾದಾರ, ಬಾಬು ಮಜಗೆ, ಮಹೇಶ್ ಪೂಜಾರಿ, ಸೇರಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.