ಬಕ್ರೀದ್ ತ್ಯಾಗ ಬಲಿದಾನದ ಪ್ರತೀಕ:ಡಾ.ಖಾಜಿ
ತಾಳಿಕೋಟೆ:ಜೂ.18: ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಡಾ. ಮಿನಹಾಜುದ್ದೀನ ಖಾಜಿ ಅವರು ಮಾತನಾಡಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವು ಪ್ರವಾದಿಗಳು ತಮ್ಮ ಪುತ್ರ ಇಸ್ಮಾಯೀಲರನ್ನು ದೇವ ಸಂಪ್ರೀತಿಗಾಗಿ ಬಲಿ ನೀಡಲು ಮುಂದಾದ ಅವಿಸ್ಮರಣೀಯ ಘಟನೆಯನ್ನು ಸ್ಮರಿಸುವ ದಿನವಾಗಿದೆ. ನಾವೆಲ್ಲರೂ ದೇವನಲ್ಲಿ ಅಚಲವಾದ ವಿಶ್ವಾಸವನ್ನಿಟ್ಟು ಧರ್ಮದ ಆಚರಣೆ ಮತ್ತು ನಿಯಮಗಳನ್ನು ಪರಿಪಾಲಿಸಿ ಧರ್ಮವಂತರಾಗಬೇಕು ಎಂದ ಅವರು ಅಲ್ಲಾಹನಿಗೆ ಪ್ರಾಮಾಣಿಕ ಗುಣ ಅತ್ಯಂತ ಪ್ರಿಯವಾದದ್ದು ಅದನ್ನು ಬೆಳೆಸಿಕೊಂಡರೆ ಪುಣ್ಯ ಪ್ರಾಪ್ತವಾಗುತ್ತದೆ. ಎಂದಿಗೂ ಅನ್ಯಾಯದ ಮಾರ್ಗ ತುಳಿಯಬಾರದು ಶ್ರಮವಹಿಸಿ ದುಡಿದ ಹಣದಿಂದ ದೊರಕುವ ಸಂತೃಪ್ತಿ ಪಾಪದ ದುಡ್ಡಿನಿಂದ ಎಂದೂ ದೊರಕುವುದಿಲ್ಲ ಬಡವರ ಕಷ್ಟಗಳಿಗೆ ಸ್ಪಂದಿಸಬೇಕು. ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸಿದರೆ ದೇವರು ಸಂತುಷ್ಟ ನಾಗುತ್ತಾನೆ. ಪ್ರವಾದಿ ಮೊಹಮ್ಮದರ ಆದರ್ಶಗಳನ್ನು ಅನುದಿನವೂ ಅನುಸರಿಸಿ. ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಧರ್ಮದ ತಿರುಳು ಅರಿಯದೆ ಹೋದರೆ ಇನ್ನೊಂದು ಧರ್ಮವನ್ನು ತಿಳಿಯುವುದು ಮತ್ತು ಪ್ರೀತಿಸುವುದು ಅಸಾಧ್ಯ ದೇಶದ ಕಾನೂನು ಮತ್ತು ಇತರ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹಮದ ಖಾಜಿ, ಹಫೀಜ ಇಬ್ರಾಹಿಂ ಮುಲ್ಲಾ, ಖಾಜಾಹುಸೇನ ಡೋಣಿ, ಅಬ್ದುಲ್ ರೆಹಮಾನ ಎಕೀನ, ಗನಿಸಾಬ ಲಾಹೋರಿ, ಅಲ್ಲಾಭಕ್ಷ ನಮಾಜಕಟ್ಟಿ, ಸಿಕಂದರ ವಠಾರ, ಅಬ್ದುಲ್ ರಜಾಕ್ ಮನಗೂಳಿ, ಸೈಯದ್ ಫಸಿಯುದ್ದೀನ ಖಾಜಿ, ಮಹಿಬೂಬ ಚೋರಗಸ್ತಿ, ಇಬ್ರಾಹೀಮ ಮನ್ಸೂರ, ಹಸನಸಾಬ ಮನಗೂಳಿ, ಅಬ್ದುಲ್ ರಹಿಮಾನ ನಮಾಜಕಟ್ಟಿ, ದಾದಾಪೀರ ಚೌದ್ರಿ, ಶಮಸುದ್ದೀನ ನಾಲಬಂದ, ಕೆ.ಆಯ್.ಸಗರ, ಎಂ.ಎ.ಮೇತ್ರಿ, ರೋಶನ ಡೋಣಿ, ಅಬ್ದುಲ್ ಸತ್ತಾರ ಅವಟಿ, ಫಯಾಜ ಖಾಜಿ, ಮುಜಾಹೀದ ನಮಾಜಕಟ್ಟಿ, ತನವೀರ ಮನಗೂಳಿ, ನಬಿ ಹುಣಶ್ಯಾಳ, ಶಫೀಕ ಇನಾಮದಾರ ಮೊದಲಾದವರು ಇದ್ದರು.