ಕಲುಷಿತ ನೀರು ಸೇವನೆ 40 ಕ್ಕೂ ಹೆಚ್ಚು ಜನರು ಅಸ್ವಸ್ಥ
ತಾಳಿಕೋಟೆ:ಜೂ.18: ತಾಲೂಕಿನ ನಾವದಗಿ ಗ್ರಾಮ ಒಳಗೊಂಡು ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕಲುಷಿತ ನೀರು ಸೇವಿಸಿ 40 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಜರುಗಿದ್ದು ಕೆಲವು ಗ್ರಾಮಗಳಲ್ಲಿ ಬೋರವ್ಹೇಲ್ ನೀರು ಕಲುಷಿತವೆಂದು ಕಂಡುಬಂದರೆ ಇನ್ನೂ ಕೆಲವು ಗ್ರಾಮಗಳಲ್ಲಿ ಜೆಜೆಎಂ, ಭಾವಿ ನೀರು ಕಲುಷಿತವೆಂದು ಕಂಡುಬಂದಿದೆ.
ತಾಲೂಕಿನಲ್ಲಿ ಕಲುಷಿತ ನೀರು ಸೇವನೆಯಿಂದ ಅತೀ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿ ಚಿಕೀತ್ಸೆ ಪಡೆದವರಲ್ಲಿ ನಾವದಗಿ ಗ್ರಾಮದವರಾಗಿದ್ದು ಎರಡನೇ ಹಂತದಲ್ಲಿ ಶಿವಪೂರ, ಮಿಣಜಗಿ, ಲಿಂಗದಳ್ಳಿ, ಕಲ್ಲದೇವನಹಳ್ಳಿ, ಮೂಲೇಶ್ವರ, ಲಕ್ಕುಂಡಿ, ಬ.ಸಾಲವಾಡಗಿ ಗ್ರಾಮದವರು ವಾಂತಿಬೇದಿಯಿಂದ ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಚಿಕೀತ್ಸೆ ಪಡೆದುಕೊಂಡಿದ್ದಾರೆ.
ನಾವದಗಿ ಗ್ರಾಮದ ಕಸ್ತೂರಿಬಾಯಿ ಬಡಿಗೇರ, ಕುಬೇರಪ್ಪ ಬಡಿಗೇರ, ಹುಲಗೆಪ್ಪ ಕುರೇಕನಾಳ, ಚೈತ್ರಾ ಮೊಡಲಗೇರಿ, ಇವರು ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಚಿಕೀತ್ಸೆ ಪಡೆದುಕೊಂಡಿದ್ದರೆ ಇನ್ನೂ 15 ರಿಂದ 20 ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕೀತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಿಣಜಗಿ ಗ್ರಾಮದವರಾದ ಶಂಕ್ರಮ್ಮ ಮೇಲ್ದಾಪೂರ, ಈರಮ್ಮ ಗುಂಡಕನಾಳ, ಬಸವರಾಜ ಕೊಳೂರ, ಅವರು ಶಿವಪೂರ ಗ್ರಾಮದವರಾದ ಭಾಗ್ಯಾ ವಡಗೇರಿ, ಲಿಂಗದಳ್ಳಿ ಗ್ರಾಮದವರಾದ ಯಲ್ಲಪ್ಪ ನಾಯಕ, ಕಲ್ಲದೇವನಹಳ್ಳಿಯ ಪೂಜಾ ಮೇಲ್ದಾಪೂರ, ಮೈಲೇಶ್ವರ ಗ್ರಾಮದ ದಾನಮ್ಮ ಕಟ್ಟಿಮನಿ, ಲಕ್ಕುಂಡಿ ಗ್ರಾಮದವರಾದ ದೇವಮ್ಮ ಹರನಾಳ, ಬ.ಸಾಲವಾಡಗಿ ಗ್ರಾಮದವರಾದ ಹಣಮಮ್ಮ ಹಳ್ಳಿ ಅವರು ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕೀತ್ಸೆ ಪಡೆದುಕೊಂಡಿದ್ದರೆ ಪ್ರತಿ ಗ್ರಾಮದಿಂದ 10 ರಿಂದ 15 ಜನರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕೀತ್ಸೆ ಪಡೆದುಕೊಂಡಿದ್ದಾರೆನ್ನಲಾಗಿದೆ.
ನಾವದಗಿ ಗ್ರಾಮದಲ್ಲಿ ಇತ್ತೀಚಗೆ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿರುವ ಜೆಜೆಎಂ ಅಡಿ ಹಾಕಲಾದ ಪೈಪಲೈನಗಳು ಅಲ್ಲಲ್ಲಿ ಒಡೆದಿದ್ದು ಇದರಿಂದ ಪೈಪುಗಳಲ್ಲಿ ಕಲುಷಿತ ನೀರು ಸೇರಿಕೊಂಡು ಪೂರೈಕೆಯಾಗಿದ್ದೇ ಈ ವಾಂತಿ ಬೇದಿಗೆ ಕಾರಣವೆನ್ನಲಾಗುತ್ತಿದ್ದು ಅದರ ಜೊತೆಗೆ ಕೈ ಬೋರವ್ಹೇಲ್ ಮತ್ತು ಭಾವಿ ನೀರು ಕೂಡಾ ಕಲುಷಿತಗೊಂಡಿದ್ದು ಈ ನೀರನ್ನೂ ಕೂಡಾ ಜನರು ಬಳೆಸುತ್ತಿದ್ದು ಇದರಲ್ಲಿ ಯಾವ ನೀರು ಕಲುಷಿತ ಮತ್ತು ಯಾವ ನೀರು ಶುದ್ದವೆಂಬುದು ಗ್ರಾಮಸ್ಥರಿಗೆ ತಿಳಿಯದಂತಾಗಿದೆ.
ಮಿಣಜಗಿ, ಶಿವಪೂರ, ಲಿಂಗದಳ್ಳಿ, ಕಲ್ಲದೇವನಹಳ್ಳಿ, ಮೈಲೇಶ್ವರ, ಲಕ್ಕುಂಡಿ, ಬ.ಸಾಲವಾಡಗಿ ಗ್ರಾಮಗಳಿಂದಲೂ ವಾಂತಿ ಬೇದಿ ರೋಗಿಗಳು ಆಸ್ಪತ್ರೆಗೆ ಆಗಮಿಸಿ ಚಿಕೀತ್ಸೆ ಪಡೆದುಕೊಂಡಿದ್ದು ಈ ಕಲುಷಿತ ನೀರಿನಬಗ್ಗೆ ಕ್ರಮ ವಹಿಸಲು ಈಗಾಗಲೇ ಆಯಾ ಗ್ರಾಂ ಪಂಚಾಯ್ತಿ ಅಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಲಾಗಿದೆ ಹೆಚ್ಚು ಪ್ರಕರ್ಣಗಳು ಕಂಡುಬಂದ ನಾವದಗಿ ಗ್ರಾಮಕ್ಕೆ ಆರೋಗ್ಯ ಇಲಾಖೆಯ ತಂಡವು ಬೀಡು ಬಿಟ್ಟಿದೆ ಅಲ್ಲದೇ ಪ್ರತಿ ಮನೆಯವರಿಗೆ ತಪಾಸಣಾ ಕಾರ್ಯ ಮುಂದುವರೆಸಿದ್ದು ಅಂತಹ ಪ್ರಕರ್ಣ ಕಂಡುಬಂದ ರೋಗಿಗಳಿಗೆ ಸ್ಥಳದಲ್ಲಿಯೇ ಚಿಕೀತ್ಸೆ ಒದಗಿಸುವಂತಹ ಕಾರ್ಯದಲ್ಲಿ ತೊಡಗಿದ್ದಾರೆಂದು ತಾಲೂಕಾ ಆಡಳಿತ ವೈಧ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಕಲುಷಿತ ನೀರು ಪತ್ತೆ ಹಚ್ಚಿ ಸರಿಪಡಿಸಿ