ಬಸವನ ಖಣಿ: ಕುಡಿಯುವ ನೀರಿಗಾಗಿ ಜನರ ಪರದಾಟ :ಚರಂಡಿ ನೀರು ಮಿಶ್ರಿತ ಬಾವಿಯೇ ಆಸರೆ
ಮಂಜು ಸ್ವಾಮಿ
ಚಿತ್ತಾಪುರ,ಸೆ.25-ತಾಲೂಕಿನ ವಾಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಬಸವನ ಖಣಿಯ ವಾರ್ಡ್ ಸಂಖ್ಯೆ 1ರಲ್ಲಿನ ನಿವಾಸಿಗಳು ಸುಮಾರು 10 ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಈ ಬಡಾವಣೆಯಲ್ಲಿ ನಾಲ್ಕು ನೂರಕ್ಕು ಹೆಚ್ಚು ಮನೆಗಳಿದ್ದು, ಸಾವಿರಾರು ಜನಸಂಖ್ಯೆ ಇದೆ. ಆದರೆ ಬಡಾವಣೆಯಲ್ಲಿ ಕೇವಲ ಒಂದೇ ಒಂದು ಬಾವಿ ಇದೆ. ಆ ಬಾವಿಯಲ್ಲಿ ಚರಂಡಿಯ ನೀರು ಬಂದು ಸೇರಿ ಕುಡಿಯಲು ಯೋಗ್ಯವಾಗಿಲ್ಲ. ಆದರೂ ಸಹ ಇಲ್ಲಿನ ಜನ ಇದೇ ನೀರನ್ನೆ ಕುಡಿಯುವಂತಾಗಿದೆ. ದುಗರ್ಂಧ ಬೀರುವ ನೀರು ಕುಡಿದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇಷ್ಟಾದರೂ ಸಹ ಅಧಿಕಾರಿಗಳು ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿಲ್ಲ.
ಈ ಬಡಾವಣೆಯಲ್ಲಿ ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು, ಮೈಲುಗಟ್ಟಲೇ ದೂರ ಹೋಗಿ ಬಾವಿಯಲ್ಲಿನ ಚರಂಡಿ ನೀರು ಮಿಶ್ರಿತ ನೀರು ತಂದು ಕುಡಿಯಬೇಕಾದ ದುಸ್ಥಿತಿ ಎದುರಾಗಿದೆ. ತಮ್ಮ ಒಂದು ದಿನದ ಕೂಲಿ ಕಳೆದೆಕೊಂಡು ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ ಕಟ್ಟಿಕೊಳ್ಳುವಂತಾಗಿದೆ ಎಂದು ವಾರ್ಡ ನಿವಾಸಿಗಳಾದ ಶ್ಯಾಮವ್ವ, ತಿಮ್ಮವ್ವ, ಅನುಷಾಬಾಯಿ, ಆಶಪ್ಪ ಚೌದ್ರಿ, ಮರ್ಗಮ್ಮ, ರಾಮು ಚೌದ್ರಿ, ಕುಮಾರ್ ರಾಠೋಡ್,ವೇನುರಾಮ್ ಅವರು ತಮ್ಮ ಅಳಲನ್ನು ತೋಡಿಕೊಂಡರು.
……………..
ವಾರ್ಡ್ ಸಂಖ್ಯೆ 1ರಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪುರಸಭೆಯ ಮುಖ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರುತ್ತಿದ್ದಾರೆ, ಈ ವಾರ್ಡ್‍ಗೆ ನೂತನ ಟ್ಯಾಂಕ್ ಮಂಜೂರು ಆಗಿದೆ. ಎರಡು ತಿಂಗಳಿನಲ್ಲಿ ಮಾಡುತ್ತೆವೆ ಎಂದು ಹೇಳಿ ನಾಲ್ಕು ತಿಂಗಳೆ ಕಳೆದರು ಸಹಿತ ಇಲ್ಲಿಯ ವರೆಗೆ ಯಾವುದೇ ಕಾಮಗಾರಿ ಪ್ರಾರಂಭಿಸಿಲ್ಲ. ತಾತ್ಕಾಲಿಕ ವ್ಯವಸ್ಥೆ ಕೂಡ ಮಾಡಿಲ್ಲ, ಒಂದು ವಾರದಲ್ಲಿ ನೀರಿನ ಸೌಲಭ್ಯ ಕಲ್ಪಿಸದೆ ಇದ್ದರೆ ಮುಂಬರುವ ದಿನಗಳಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡಲಾಗುವುದು.
-ಗಣೇಶ ರಾಠೋಡ, ಕರವೇ ಕಾರ್ಯಕರ್ತ
………………….
ನನಗೀಗ 70 ವರ್ಷ ವಯಸ್ಸಾಗಿದೆ. ಕಣ್ಣು ಕಾಣಲ್ಲ, ನಡಿಯೋಕೆ ಬರಲ್ಲ ಅಲ್ಲದೆ, ನನಗೆ ಹಿಂದೆ ಮುಂದೆ ಯಾರು ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ ಒಂದು ಕಿಲೋಮೀಟರ್ ದೂರದಲ್ಲಿ ಹೋಗಿ ನೀರು ಹೊತ್ತು ತರುವುದು ಕಷ್ಟಕರವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಶಾಸಕರು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು.
-ಗದ್ದೆಮ್ಮ, ವಯೋವೃದ್ಧೆ