ಬಸವ ಪಥದಲ್ಲಿ ಸಾಗಿದರೆ ಬದುಕು ಬಂಗಾರ: ನಾಲವಾರ ಶ್ರೀ
ಕಲಬುರಗಿ,ಸೆ.25-ಮನುಕುಲಕ್ಕೆ ಕಾಯಕದ ಮಹತ್ವ, ದಾಸೋಹದ ಶ್ರೇಷ್ಠತೆಯನ್ನು ಸಾರಿದ ಬಸವಾದಿ ಶಿವಶರಣರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯವಾಗಿದ್ದು, ಮನುಷ್ಯರಲ್ಲಿ ಭಕ್ತಿಯ ಜೊತೆಗೆ ಸಮಾಜದ ಸೇವಾ ಪ್ರಜ್ಞೆಯನ್ನು ಮೂಡಿಸಿ ಸರಳತೆಯ ಮೂಲಕ ಸಾಧನೆ ಮಾಡಿ ಸಾಧಕರಾಗಬಹುದೆಂದು ತೋರಿಸಿಕೊಟ್ಟಿದ್ದಾರೆಂದು ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅಬಿಪ್ರಾಯಪಟ್ಟರು.
Àಇಲ್ಲಿನ ಕರುಣೇಶ್ವರ ನಗರದಲ್ಲಿರುವ ಕೋರಿಸಿದ್ದೇಶ್ವರ ಶಾಖಾಮಠದಲ್ಲಿ ಸುಲಫಲಮಠ ಮತ್ತು ಶ್ರೀಶೈಲಂ ಸಾರಂಗಪೀಠದ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ ಪೂಜ್ಯರ ಗುರುವಂದನಾ ಮಹೋತ್ಸವದ ಸತ್ಕಾರ
ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಬದುಕು ಇಂದು ಬರುಡಾಗುತ್ತಿದ್ದು, ಬರುಡಾದ ಬದುಕಿಗೆ ಬಸವ ಮಾರ್ಗ ಬೆಳಕು ತೋರಬಲ್ಲದು. ಪ್ರತಿಯೊಬ್ಬರೂ ಬಸವಪಥದಲ್ಲಿ ಸಾಗಿದರೆ ಬದುಕು
ಬಂಗಾರವಾಗಲಿದೆ ಎಂದರು.
ಸಮಸ್ತ ಶ್ರೀ ಮಠದ ಭಕ್ತಸಮೂಹ ಹಾಗೂ ಕರುಣೇಶ್ವರ ಮಹಾನಗರದ ಜನತೆ ವತಿಯಿಂದ ಪೂಜ್ಯರಿಗೆ ಗುರುವಂದನೆ ಸಲ್ಲಿಸಲಾಯಿತು. ಮಹಾನಗರ ಪಾಲಿಕೆಯ ಸದಸ್ಯೆ ಅರ್ಚನಾ ಬಸವರಾಜ ಪಾಟೀಲ ಬಿರಾಳ, ಮುಖಂಡರಾದ ಕೆ.ಎಸ್.ಹಿರೇಮಠ, ಚನ್ನಬಸಪ್ಪ ಬಿರಾದಾರ, ಬಸವರಾಜ ಮುಕ್ಕಾಣಿ, ರೇವಣಸಿದ್ದಪ್ಪಾ ಸಂಕಾಲಿ, ಡಾ. ಅಂಬ್ರಪ್ಪ ಜಂಪಾ, ಬಸವರಾಜ ಬಿರಾಳ, ಸುರೇಶ ತಂಗಾ, ನಾಗಲಿಂಗಯ್ಯ ಮಠಪತಿ, ಜಯಣ್ಣ ಪತ್ತಾರ, ಸಂತೋಷ ಮದರಿ, ಶಶಿಕಾಂತ ಪಾಟೀಲ, ರಮೇಶ ಹೂಗಾರ, ಶಿವಶರಣಪ್ಪ ಹೂಗಾರ, ಕರುಣೇಶ ಆಂದೋಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.