ಬೀದರ ಜಿಲ್ಲೆ ಸಕ್ಕರೆ ಕಾರ್ಖಾನೆ ರಕ್ಷಿಸಬೇಕಾಗಿದೆ: ಭಗವಂತ ಖೂಬಾ
ಬೀದರ,ಸೆ 25: ಜಿಲ್ಲೆಯ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಎಲ್ಲರೂ ಸೇರಿ ಉಳಿಸಬೇಕಾಗಿದೆ. ಇದರ ರಕ್ಷಣೆಗೆ ಜಿಲ್ಲೆಯ ಎಲ್ಲಾ ರೈತರು, ಮಠಾಧೀಶರು, ಸಮಾಜ ಸೇವಕರು, ಬುದ್ಧಿಜೀವಿಗಳು ಸಲಹೆ ಮತ್ತು ಸಹಕಾರ ನೀಡಿ, ರಾಜಕೀಯ ರಹಿತವಾಗಿ ಕೈ ಜೋಡಿಸಬೇಕೆಂದು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಫೇಸ್‍ಬುಕ್ ಲೈವ್ ಮುಖಾಂತರ ಎಲ್ಲರಲ್ಲಿ ವಿನಂತಿಸಿಕೊಂಡಿದ್ದಾರೆ.
ಡಿ.ಸಿ.ಸಿ. ಬ್ಯಾಂಕಿಗೆ ಹೊಸ ಅಧ್ಯಕ್ಷರು ಬಂದ ಮೊದಲ ವರ್ಷದಲ್ಲೆ ರೂ. 111 ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ಕಾರಣ ಬಿ.ಎಸ್.ಎಸ್.ಕೆ, ಎನ್.ಎಸ್.ಎಸ್.ಕೆ, ಎಮ್.ಜಿ.ಎಸ್.ಎಸ್.ಕೆಯ ಸಾಲ ಎಂದು ಸಬೂಬು ಹೇಳುತ್ತಿದ್ದಾರೆ. ಡಿ.ಸಿ.ಸಿ. ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಸರ್ಫೇಸ್ ಕಾಯ್ದೆ 2002 ರಡಿ ಎಮ್.ಜಿ.ಎಸ್.ಎಸ್.ಕೆ ಮತ್ತು ಎನ್.ಎಸ್.ಎಸ್.ಕೆ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಪತ್ರ ವ್ಯವಹಾರ ಮಾಡಿಸಿ, ಈ ಸಕ್ಕರೆ ಕಾರ್ಖಾನೆಗಳನ್ನು ಡಿ.ಸಿ.ಸಿ. ಬ್ಯಾಂಕ್ ಹತೋಟಿಗೆ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದಾರೆ ಇಂದು ಖಂಡನೀಯ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೆ ಅಮರ ಖಂಡ್ರೆಯವರು, ಈ ಕಾಯ್ದೆಯಡಿ ಬಿ.ಎಸ್.ಎಸ್.ಕೆಯ 140 ಎಕ್ಕರೆ ಜಮೀನು ಡಿ.ಸಿ.ಸಿ. ಬ್ಯಾಂಕ ಹೆಸರಿಗೆ ಮಾಡಿಕೊಂಡಿದ್ದಾರೆ, ಆದರೆ ಇದನ್ನು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಈಶ್ವರ ಖಂಡ್ರೆಯವರು ಸರ್ಕಾರದಿಂದ ಸಹಾಯ ಮಾಡಿಸಿ, ಒತ್ತಡ ತಂದು ತಡೆಯಬಹುದಾಗಿತ್ತು, ಆದರೆ ಇದ್ಯಾವುದು ಮಾಡಿಲ್ಲ. ಈ ಕಾರಣಕ್ಕಾಗಿ ಬಿ.ಎಸ್.ಎಸ್.ಕೆಯ ಜಮೀನು ಡಿ.ಸಿ.ಸಿ. ಬ್ಯಾಂಕ್ ಪಾಲಾಗಿದೆ, ಇದು ಬೀದರ ಜಿಲ್ಲೆಯ ಇತಿಹಾಸದಲ್ಲೆ ಅತ್ಯಂತ ದುರದೃಷ್ಟಕರ ವಿಷಯವಾಗಿದೆ.
2018ರಲ್ಲಿಯೆ ಬಿ.ಎಸ್.ಎಸ್.ಕೆ ಸರ್ಫೇಸ್ ಕಾಯ್ದೆ 2002ರೊಳಗೆ ಒಳಪಟ್ಟಿತ್ತು, ಅಂದೆ ಬಿ.ಎಸ್.ಎಸ್.ಕೆ ಮುಚ್ಚಬಹುದಿತ್ತು, ಆದರೆ ನಮ್ಮ ಬಿಜೆಪಿ ಸರ್ಕಾರ ಮತ್ತು ಕುಮಾರಸ್ವಾಮಿಯವರ ಸರ್ಕಾರ ಇದನ್ನು ಮಾಡದೆ, ಸರ್ಕಾರದಿಂದ ಸಹಾಯ ಮಾಡಿ ಬಿ.ಎಸ್.ಎಸ್.ಕೆಯನ್ನು ಉಳಿಸಿದ್ದರು. ಡಿ.ಸಿ.ಸಿ. ಬ್ಯಾಂಕಿಗೆ ಬಿ.ಎಸ್.ಎಸ್.ಕೆ ಆಸ್ತಿ ಹೊಗಲು ಬಿಟ್ಟಿರಲಿಲ್ಲ.
ಬಿ.ಎಸ್.ಎಸ್.ಕೆ ಕಾರ್ಖಾನೆಗೆ ಈ ಹಿಂದೆ ದಿ. ಮಿರಾಜೋದ್ದಿನ ಪಟೇಲ್, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಮತ್ತು ಕಳೆದ ಬಾರಿ ನಮ್ಮ ಬಿಜೆಪಿ ಸರ್ಕಾರದಿಂದ ಬಿ.ಎಸ್.ಎಸ್.ಕೆ ಪುನಶ್ಚೇತನಕ್ಕೆ ಆದಷ್ಟೂ ಅನುದಾನದ ಸಹಾಯ, ಸಹಕಾರ ನೀಡಲಾಗಿತ್ತು, ಇದರಿಂದ ಕಾರ್ಖಾನೆಗೆ ಸಹಾಯವಾಗಿತ್ತು, ಆದರೆ ಸದ್ಯದ ರಾಜ್ಯ ಸರ್ಕಾರ ಒಂದು ಬಿ.ಎಸ್.ಎಸ್.ಕೆಗೆ ನಯಾ ಪೈಸೆಯೂ ಕೊಟ್ಟಿಲ್ಲ. ಇದು ಅತ್ಯಂತ ಖೇದಕರ ಸಂಗತಿಯಾಗಿದೆ.
ಈಗಾಗಲೆ ನಮ್ಮ ಕೇಂದ್ರ ಸರ್ಕಾರದಿಂದ ಸಕ್ಕರೆ ಕಾರ್ಖಾನೆಗಳಲ್ಲಿ ಏಥೇನಾಲ್ ತಯಾರಿಸಲು ಅನುಮತಿ ನೀಡಿದ್ದಲ್ಲದೆ, ಅವುಗಳ ಬಳಕೆಗೂ ಕಾನುನು ರೂಪಿಸಿದೆ ಮತ್ತು ಪ್ರತಿ ಟನ್ ಕಬ್ಬಿಗೆ 50ರೂಪಾಯಿ ಸಹಾಯಧನ ನೀಡುತ್ತಿದೆ, ಇಂತಹ ಸಮಯದಲ್ಲಿ ನಮ್ಮ ಜೀವನಾಡಿಯಾಗಿರುವ ಈ ಮೂರು ಕಾರ್ಖಾನೆಗಳು ಸಹಕಾರಿ ಕ್ಷೇತ್ರದಲ್ಲೆ ಇರಬೇಕಾಗಿರುವುದು ಅತ್ಯಾವಶ್ಯಕವಾಗಿದೆ, ಯಾವೂದೇ ಕಾರಣಕ್ಕೂ ಖಾಸಗಿಯವರ ಪಾಲಾಗಲು ಬಿಡಬಾರದು ಎಂದು ರೈತರಿಗೆ ಮುನ್ನೆಚ್ಚರಿಕೆ ನಿಡಿದ್ದಾರೆ. ಈ ಮೂರು ಸಕ್ಕರೆ ಕಾರ್ಖಾನೆಗಳ ಉಳಿವಿಗೆ, ಮುಖ್ಯಮಂತ್ರಿಗಳ ಬಳಿಗೆ ರೈತರ ನಿಯೋಗವನ್ನು ಕೊಂಡ್ಯೋಯ್ದು, ಸಹಾಯ ಹಸ್ತ ಚಾಚಲು ಉದ್ದೇಶಿಸಿದ್ದೇನೆ ಎಂದು ಮಾಜಿ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.