ಪೆಟ್ರೋಲ್ ಡಿಸೇಲ್ ಬೆಲೆ ಎರಿಕೆ ಖಂಡನೀಯ: ಅಮೀನರೆಡ್ಡಿ ಪಾಟೀಲ
ಕೆಂಭಾವಿ:ಜೂ.18:ರಾಜ್ಯ ಸರಕಾರ ಏಕಾಏಕಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಸಿರುವದು ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರಕಾರ ಜನರ ಮೇಲೆ ಆರ್ಥಿಕ ಹೊರೆಯನ್ನು ಹೊರಿಸುತ್ತಿದೆ. ಯಾವದೆ ಮುಂಜಾಗ್ರತೆ ಇಲ್ಲದೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಏರಿಸಿದ್ದು ಯಾವ ಪುರಷಾರ್ಥಕ್ಕಾಗಿ. ಒಂದು ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ಎಲ್ಲರಿಗೆ ತೆರಿಗೆ ಹೆಚ್ಚಿಸುವದು ಎಷ್ಟು ಸಮಂಜಸ. ತೈಲ ಬೆಲೆ ಏರಿಕೆಯಿಂದ ದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಇದರಿಂದ ಸಾಮಾನ್ಯ ಜನರು ಬದುಕುವದು ಕಷ್ಟವಾಗುತ್ತದೆ.
ಇದು ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಗ್ಯಾರಂಟಿಯಾಗಿದೆ. ಸರಕಾರ ತಮ್ಮ ಜವಾಬ್ಧಾರಿಯನ್ನು ಮರೆತು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸರಕಾರದ ಮಂತ್ರಿಗಳು ಸಹ ಇದನ್ನು ಸಮರ್ಥಿಸಿಕೊಳ್ಳುತ್ತಿರುವದು ಖಂಡನೀಯ. ಸರಕಾರದ ಕೂಡಲೆ ತೈಲ ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿದ್ದಾರೆ