ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ದ; ಸಚಿವ ಜಿ.ಪರಮೇಶ್ವರ್

ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಜೂ.18: ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ದವಾಗಿದ್ದು, ಜೀವನ ನಿರ್ವಹಣೆಗಾಗಿ ರೇಣುಕಾಸ್ವಾಮಿ ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಗೃಹ ಸಚಿವ ಜಿ‌.ಪರಮೇಶ್ವರ ಭರವಸೆ ನೀಡಿದ್ದಾರೆ.ಚಿತ್ರದುರ್ಗದಲ್ಲಿನ ಮೃತ ರೇಣುಕಾಸ್ವಾಮಿ ಮನೆಗೆ ಮಂಗಳವಾರ ಭೇಟಿ ನೀಡಿದ ಅವರು, ಈ ಕೊಲೆ ಪ್ರಕರಣ ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದು, ಎಂತಹವರಿಗೂ ಬಹಳ‌ ನೊವ್ವಾಗುವ ರೀತಿಯಲ್ಲಿ ಕೊಲೆ ನಡೆದಿದ್ದು, ಇದರಿಂದಾಗಿ ಸರ್ಕಾರ ವತಿಯಿಂದ ರೇಣುಕಾಸ್ವಾಮಿ  ಕುಟುಂಬ ವರ್ಗಕ್ಕೆ ಸಾಂತ್ವಾನ, ಧೈರ್ಯ ಹೇಳಲು ಬಂದಿರುವುದಾಗಿ ಹೇಳಿದ ಅವರು, ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.ಈ ಮೊದಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಗಳು ಬಂದಿದ್ದವು. ಆದರೆ ಈಗ ಅದರ ಅಗತ್ಯ ಇಲ್ಲ. ಕೊಲೆ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ತಿಳಿದು, 48  ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದೆವೆ. ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದು, ಪ್ರಮಾಣಿಕವಾಗಿ ತನಿಖೆ ನಡೆಸುತ್ತಿದ್ದಾರೆ ಹಾಗಾಗಿ‌ ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದರು.ಯಾವ ಪಕ್ಷವೇ ಆಗಿರಲಿ ಎಲ್ಲಾ ವಿಷಯವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು ಎಂದು ಮನವಿ ಮಾಡಿದರು.ಕೊಲೆ ಪ್ರಕರಣದಲ್ಲಿ ಯಾವ ಸಚಿವರು ಭಾಗಿ ಆಗಿಲ್ಲ. ಇದು ತಪ್ಪು ಮಾಹಿತಿ. ಅಲ್ಲದೆ, ಸಚಿವರುಗಳು ಭಾಗಿ ಆಗುವ ಪ್ರಮಯವೂ ಬರುವುದಿಲ್ಲ. ಪೊಲೀಸರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.