ವ್ಯಕ್ತಿ ಅಪಹರಿಸಿ ಸುಲಿಗೆ ಇಬ್ಬರು ಆರೋಪಿಗಳು ಸೆರೆ
ಬೆಂಗಳೂರು,ಜೂ.೧೮-ಬೈಕ್‌ನಲ್ಲಿ ಮಧ್ಯರಾತ್ರಿ ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸುಲಿಗೆಕೋರರಿಂದ ಕೃತ್ಯಕ್ಕೆ ಬಳಸಿದ ಬೈಕ್ ಸೇರಿ ೧.೬೦ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಅಸ್ಸಾಂ ಮೂಲದ ಸುಲಿಗೆಕೋರರು ಕಳೆದ ಜೂ.೯ ರಂದು ರಾತ್ರಿ ೧೨.೩೦ರ ವೇಳೆ ಬಾಣಸವಾಡಿಯ ಹೊರವರ್ತುಲ ರಸ್ತೆಯ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ ಮೊಬೈಲ್, ಹಣ ಸುಲಿಗೆ ಮಾಡಿದ್ದರು.
ಈ ಸಂಬಂಧ ಬಂದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಬಂಧನ:
ಹೆಣ್ಣೂರು ಪೊಲೀಸರು ಮೊಬೈಲ್ ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಜೂ.೬ ರಂದು ಮುಂಜಾನೆ ಚಿಳ್ಳಕೆರೆ ಪಿಳ್ಳಣ್ಣ ಲೇಔಟ್ ನ ಮನೆಯೊಂದಕ್ಕೆ ನುಗ್ಗಿದ ಬಂಧಿತ ಆರೋಪಿಗಳು ಸ್ನೇಹಿತರಿಬ್ಬರ ಮೊಬೈಲ್ ಗಳನ್ನು ಕಸಿದು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ ಎರಡು ಬೈಕ್‌ಗಳು ೫ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ವಿದೇಶಿ ಮಹಿಳೆಯರ ರಕ್ಷಣೆ:
ಬಾಣಸವಾಡಿ ಪೊಲೀಸರು ಹೊಟೇಲ್ ವೊಂದರ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆ ಜಾಲವನ್ನು ಬೇಧಿಸಿ ಇಬ್ಬರು ವಿದೇಶಿ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ವೇಶ್ಯಾವಾಟಿಕೆ ಸಂಬಂಧಿಸಿದಂತೆ ಹೋಟೆಲ್ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮನೆಗಳ್ಳನ ಸೆರೆ:
ಜಯನಗರ ಪೊಲೀಸರು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ೧೦ ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ. ಬೀಗ ಹಾಕಿಕೊಂಡು ಊರಿಗೆ ಹೊಗಿದ್ದ ದೂರುದಾರರು ವಾಪಾಸ್ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿತ್ತು.
ಊರಿಗೆ ಹೊಗುವಾಗ ಮನೆಯ ಪಕ್ಕದ ಮನೆವರಿಗೆ ಕೀ ಕೊಟ್ಟಿದ್ದರು. ಪಕ್ಕದ ಮನೆಯವರ ಮೇಲೆ ಅನುಮಾನ ಮೂಡಿ, ಮನೆ ಮಾಲೀಕ ದೂರು ನೀಡಿದ್ದರು.
ತನಿಖೆ ನಡೆಸಿದಾಗ ಪಕ್ಕದ ಮನೆಯ ವ್ಯಕ್ತಿ ಕಳ್ಳತನ ಮಾಡಿರುವುದು ಪತ್ತೆಯಾಗಿ ಆರೋಪಿಯನ್ನು ಬಂಧಿಸಲಾಗಿದ್ದು, ಕಳುವು ಮಾಡಿದ್ದ ಚಿನ್ನ ವಶಕ್ಕೆ ಪಡೆಯಲಾಗಿದೆ. ಈ ರೀತಿ ಕೃತ್ಯಗಳ ಎಸಗುವವರ ಬಗ್ಗೆ ಜನರು ಎಚ್ಚರವಿರಬೇಕು ಎಂದರು.