ಇದು ನಿಮ್ಮವಾಣಿಇಂಗ್ಲೀಷ್ ನಾಮಫಲಕ
ಮಾನ್ಯರೇ,
ಬಳ್ಳಾರಿಯ ತಾಳೂರು ರಸ್ತೆಯಲ್ಲಿನ ರೆಡ್ಡಿ ಹೋಟೆಲ್ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಿಂದ ಈ ಭಾಗದಲ್ಲಿ ಯಾವುದೇ ತರಹದ ನಾಮಫಲಕ ಇಲ್ಲದಿದ್ದಾಗಲೂ ಒಂದು ಲ್ಯಾಂಡ್ ಮಾರ್ಕನಂತೆ ಗುರುತಿಸಿಕೊಂಡಿದೆ. ಇಂಥಾ ಹೋಟಲಿನ‌ ಮುಂದೆ ಇದ್ದಕ್ಕಿದ್ದಂತೆ ಒಂದು ನಾಮಫಲಕ ಪ್ರತ್ಯಕ್ಷವಾಗಿ ನಿಂತಿದೆ…ಅದೂ ಇಂಗ್ಲೀಷ್ ನ ದೊಡ್ಡ ದೊಡ್ಡ ಅಕ್ಷರಗಳಲ್ಲಿ! (ಕನ್ನಡ ಇದ್ದೂ ಇಲ್ಲದಂತಿದೆ). ಮಾನ್ಯ ಹೋಟೆಲ್ ನ ಮಾಲೀಕರೇ ನಿಮ್ಮ ಹೋಟೆಲಿಗೆ ಬ್ರಿಟಿಷರಾರೂ ತಿಂಡಿ ತಿನ್ನಲು ಇಂಗ್ಲೆಂಡನಿಂದ ಬರುವುದಿಲ್ಲ. ಏನಿದ್ದರೂ ಇಲ್ಲಿನ ಕನ್ನಡಿಗರು, ತೆಲುಗು ಸಹೋದರರು ಮತ್ತು ಸ್ಥಳೀಯ ಜನಗಳೇ ಬರಬೇಕು. ಅಷ್ಟಕ್ಕೂ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಇಡೀ ನಾಡಿನಾದ್ಯಂತ ಕಾನೂನು ರಿತ್ಯ ಕನ್ನಡದಲ್ಲಿ ನಾಮಫಲಕ ಅಳವಡಿಸಲು ನಡೆದ ಹೋರಾಟದ ಬಗ್ಗೆ ತಮಗೆ ತಿಳಿಯದ್ದೇನಲ್ಲ? ದಯವಿಟ್ಟು ನಾಮಫಲಕದಲ್ಲಿ ಶೇಕಡಾ ಅರವತ್ತಕ್ಕಿಂತಲೂ ಹೆಚ್ಚು ಭಾಗವನ್ನು ಕನ್ನಡದ ಅಕ್ಷರಗಳನ್ನು ಬರೆಯಿಸಿ. ನಂತರ ಇನ್ನಿತರ ಯಾವುದೇ ಭಾಷೆಯನ್ನಾದರೂ ಬಳಸಿ. ಉದಾಹರಣೆಗೆ ನಿಮ್ಮದೇ ಹೋಟೆಲಿನ ಅನತಿ ದೂರದಲ್ಲಿರುವ ನುಡಿ ಕೆಫೆ ಅಥವಾ ಹಾಸನ ಅಯ್ಯಂಗಾರ್ ಬೇಕರಿಯ ಫಲಕವನ್ನು ಗಮನಿಸಿ. ಈ ನೆಲದ ಕಾನೂನನ್ನು ಗೌರವಿಸಿ.
ಡಾ.ವೀರೇಂದ್ರ ರಾವಿಹಾಳ್, ಬಳ್ಳಾರಿ.