ಗಡಿಯಾರ ಗೋಪುರದ ಮೇಲೆ ರಾಜಮುದ್ರೆ ಲಾಂಚನ ಫಿಕ್ಸ್
* ಆ.15 ಉದ್ಘಾಟನೆಯ ಗುರಿ
* 8 ಜನರ ಲಿಫ್ಟ್, 120 ಅಡಿ ಎತ್ತರ
* 1964 ರಲ್ಲಿ ಮೊದಲ ಗೋಪುರ ನಿರ್ಮಾಣ
* 2008 21, ಜೂನ್ ರಾತ್ರಿ ಮೊದಲ ಗೋಪುರ ಧ್ವಂಸ
* ಆ. 23, 2022 ಎರಡನೇ ಗೋಪುರ ಧ್ವಂಸ
ಎನ್.ವೀರಭದ್ರಗೌಡ
ಬಳ್ಳಾರಿ, ಜೂ.18: ನಗರದ ಜನ ನಿಬಿಡ ವೃತ್ತ ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿ ಇದೀಗ 120 ಅಡಿ ಎತ್ತರದ ಗಡಿಯಾರ ಗೋಪುರದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು. ಗೋಪುರದ ಮೇಲೆ ಭಾರತದ ಲಾಂಚನವನ್ನು ಅಳವಡಿಸುವ ಕಾರ್ಯ ಮುಗಿದಿದೆ. ಬಹುತೇಕ ಆ 15 ರಂದು ಇದರ ಉದ್ಘಾಟನೆಯಾಗುವ ಸಾಧ್ಯತೆ ಇದೆ.
ಅಂದಾಜು 5 ಕೋಟಿ ರೂ ವೆಚ್ಚದ ಈ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಬಂಡೆಗಲ್ಲು ಮಾದರಿಯ ವಾಲ್ ಕ್ಲಾಡಿಂಗ್ ಬಹುತೇಕ  ಆಗಿದೆ.  ಒಮ್ಮೆಗೆ 8 ಜನರು ತೆರಳಬಲ್ಲ ಲಿಫ್ಟ್ ಅಳವಡಿಕೆ ಆಗಬೇಕಿದೆ. ವಿದ್ಯುತ್, ಲೈಟಿಂಗ್ ಕಾಮಗಾರಿ ಸೇರಿದಂತೆ  ಫಿನಿಸಿಂಗ್ ವರ್ಕ್ ನಡೆಯಬೇಕಿದೆ.
ಫಿಕ್ಸ್:
ಹುಬ್ಬಳ್ಳಿಯಲ್ಲಿ ಸಿದ್ದಪಡಿಸಿದ ನಾಲ್ಕು ದಿಕ್ಕುಗಳನ್ನು ನೋಡುವ  ಸಿಂಹಗಳು, ಅಶೋಕ ಚಕ್ರವನ್ನು ಹೊಂದಿರುವ ಭಾರತ ಸರ್ಕಾರದ ಮುದ್ರೆಯ  ಮಾದರಿಯ 2.5 ಟನ್ ಭಾರದ 20 ಅಡಿ ಎತ್ತರದ  ಲಾಂಛನವನ್ನು ಮೊನ್ನೆ ರಾತ್ರಿ 99 ಅಡಿಗಳ ಎತ್ತರದ ಗಡಿಯಾರ ಗೋಪುರದ ಸ್ತಂಭದ ಮೇಲೆ ಮೊನ್ನೆ ರಾತ್ರಿ
ಕ್ರೇನ್ ಸಹಾಯದ ಮೂಲಕ ಇರಿಸಲಾಗಿದೆ. ಈಗ ಒಟ್ಟಾರೆ ಗಡಿಯಾರ ಗೋಪುರ ಸ್ಥಂಭದ ಎತ್ತರ 119 ಅಡಿಯಾಗಿದೆ.
ಗೋಪುರದ ಮೇಲೇರಿ ನಗರದ ಬಹುಭಾಗವನ್ನು ಕಾಣಬಹುದಾಗಿದೆ. ಮೇಲೇರುವ ಜನತೆಯ ಸುರಕ್ಷತೆಗೆ ತಕ್ಕ ವ್ಯವಸ್ಥೆ ಕೈಗೊಳ್ಳಬೇಕಾದುದು ಮುಖ್ಯವಾಗಿದೆ. ಏಕೆಂದರೆ ಹೀಗ ಸೆಲ್ಫಿ ಗೀಳಿನಲ್ಲಿ ಜನತೆಯ ಅನಾಹುತವನ್ನು ಲೆಕ್ಕಿಸದೇ ಮುನ್ನಡೆಯುತ್ತಾರೆ. ಭದ್ರತಾ ಸಿಬ್ಬಂದಿ ನೇಮಕ ಅವಶ್ಯವಾಗಲಿದೆ.
ಗೋಪುರದ ಬಳಿಯಿಂದ ರಾಘವ ಕಲಾಮಂದಿರದ ಕಡೆಯ ರಾಜಕುಮಾರ್ ರಸ್ತೆಯ ಅಗಲೀಕರಣದ ಕಾಮಗಾರಿ ವೇಗವನ್ನು ಪಡೆದುಕೊಳ್ಳಬೇಕಿದೆ.
ಗೋಪುರದ ಇತಿಹಾಸ:
ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರ ತಾತ ಗಡಿಗಿ ಚೆನ್ನಪ್ಪ. ಕರ್ನಾಟಕ ಏಕೀಕರಣದ ಹೋರಾಟಗಾರ ಸಮಾಜ ಸವೇ ಕಾರ್ಯಕರ್ತ, ಕ್ರಿಡಾಪಟುವಾಗಿದ್ದ ಗಡಗಿ ಚೆನ್ನಪ್ಪ ಅವರ ನೆನಪಿಗಾಗಿ ಇದನ್ನು 1964 ರಲ್ಲಿ ನಿರ್ಮಿಸಿ ಅಂದಿನ  ಮುಖ್ಯ ಮಂತ್ರಿ ನಿಜಲಿಂಗಪ್ಪ, ಆಂದ್ರ ಪ್ರದೇಶದ ಮುಖ್ಯ ಮಂತ್ರಿ ನೀಲಂ ಸಂಜೀವರೆಡ್ಡಿ, ಗುಂಡೂರಾವ್ ಇದರ ಉದ್ಘಾಟನೆ ಮಾಡಿದ್ದರು.
ಆಗಿನ ಕಾಲದಲ್ಲಿ ನಗರಕ್ಕೆ ಬರುವ ಎಲ್ಲಾ ಜನತೆಗೆ ಸಮಯವನ್ನು ನೋಡಿಕೊಳ್ಳಲು ಅನುವಾಗುವಂತೆ ದೊಡ್ಡದಾದ ಗಡಿಯಾರಗಳನ್ನು 4 ಕಡೆ ಅಳವಡಿಸಿತ್ತು. ನಗರದಲ್ಲಿ ನಡೆಯುವ ಪ್ರತಿ ಫ್ರತಿಭಟನೆಗಳಿಗೆ ಇದು ಸಾಕ್ಷಿಯಾಗಿತ್ತು.
ನಗರ ಬೆಳೆದಂತೆ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾದುದರಿಂದ ನಗರಸಭೆ ವಾಹನಗಳ ಸುಗಮ ಸಂಚಾರಕ್ಕಾಗಿ ವೃತ್ತದ ವಿಸ್ತರಣೆಗೆ ಇದನ್ನು ಕೆಡವಲು; ಇಲ್ಲಾ ಸ್ಥಾಳಾಂತರ ಮಾಡಲು ನಿರ್ಧರಿಸಿತ್ತು. ಇದನ್ನು  ಅಲ್ಲಂ ಮನೆತನದವರು ವಿರೋಧಿಸಿದ್ದರು.
ಆದರೆ 2008 ರ 21 ಜೂನ್ ಮಧ್ಯ ರಾತ್ರಿ ಲ್ಲಿ ಈ ಗೋಪುರವನ್ನು ಧ್ವಂಸ ಮಾಡಿತ್ತು.
ಪುನಃ ಇದೇ ಜಾಗದಲ್ಲಿ ಗಡಿಯಾರ ಗೋಪುರವನ್ನು  ನಿರ್ಮಿಸಬೇಕೆಂದು ಅಲ್ಲ ಮನೆತನದವರು, ವಿವಿಧ ನಾಗರೀಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು.
ಇದರಿಂದಾಗಿ ಮತ್ತೊಂದು ಗೋಪುರ ನಿರ್ಮಿಸುವ ಭರವಶೆಯನ್ನು ಅಂದಿನ ಬಿಜೆಪಿ ಸರ್ಕಾರ ನೀಡಿತ್ತಾದರೂ. ಅದು ಆಗಿದ್ದು ನಂತರದ ಕಾಂಗ್ರೆಸ್ ಸರ್ಕಾರದಲ್ಲಿ.
ಮತ್ತೆ ಬಿಜೆಪಿ ಸರ್ಕಾರ ಬಂದಾಗ ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಎರಡನೇ ಗೋಪುರವನ್ನು 2022 ರ ಲ್ಲಿ ಕೆಡವಿ ಇಲ್ಲಿ
 ಲೆಬೆನಾನ್ ಮಾದರಿಯ 120 ಅಡಿ ಎತ್ತರದ  ಗಡಿಯಾರ ಗೋಪುರದ ನಿರ್ಮಾಣ ಕಾಮಗಾರಿಗೆ
ಚಾಲನೆ ನೀಡಿದ್ದರು.
ಸ್ವತಃ ಮಾಜಿ ಸಚಿವ ಶ್ರೀರಾಮುಲು. ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಆಸಕ್ತಿ ಮೇರೆಗೆ ಈ ಗೋಪುರವನ್ನು  ನಿರ್ಮಾಣ ಮಾಡಲು ಆರಂಭಿಸಿತ್ತು.
ಅಂದಾಜು 5 ಕೋಟಿ ರೂ ವೆಚ್ಚದ ಈ ಗೋಪುರದ  ಕಾಮಗಾರಿಯನ್ನು ಕೆಲ ದಿನ‌ಕಾಲ ವೇಗವಾಗಿ ನಡೆದು ನಿಂತಿತ್ತು. ಚುನಾವಣೆಯ ನಂತರ ಬಂದ ಕಾಂಗ್ರೆಸ್ ಸರ್ಕಾರದ ಜನಪ್ರತಿನಿಧಿಗಳು  ಮತ್ತೆ  ಕಾಮಗಾರಿ ಆರಂಭಿಸಿ ಕಾಮಗಾರಿಗೆ ವೇಗ ನೀಡಿದರು.  ಈಗ ಮುಗಿಯುವ ಹಂತಕ್ಕೆ ಬಂದಿದೆ.
ಬಾಯಿ‌ ಮುಚ್ಚಿದ ಸಿಂಹಗಳು:
ಸಾಮಾನ್ಯವಾಗಿ ಭಾರತ ಲಾಂಚನದ ಸಿಂಹಗಳು ಘರ್ಜಿಸುವ ರೀತಿಯಲ್ಲಿ ಇರುತ್ತವೆ. ಆದರೆ ಈ ಗೋಪುರದ ಮೇಲೆ ಫಿಕ್ಸ್ ಮಾಡಿರುವ ಲಾಂಚನದ ಸಿಂಹಗಳು ಬಾಯಿ ಮುಚ್ಚಿಕೊಂಡ ರೀತಿಯಲ್ಲಿವೆ.
ಬಳ್ಳಾರಿ ಜನರು ಘರ್ಜಿಸುವ ರೀತಿಯಲ್ಲಿರದೆ,  ಬಾಯಿ‌ಮುಚ್ಚಿಕೊಂಡಿರಬೇಕು ಎನ್ನುವಂತೆ ಮಾಡಲಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ.