ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಹುಬ್ಬಳ್ಳಿ,ಜೂ18: ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದಲ್ಲಿಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ದಿನೇ ದಿನೇ ಪೆಟ್ರೋಲ್, ಡಿಸೇಲ್ ಬೆಲೆ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದು ದುಸ್ತರವಾಗಿದೆ. ಹೀಗಾಗಿ ಸ್ತ್ರೀ ಶಕ್ತಿ ಯೋಜನೆಯನ್ನು ಕೈಬಿಡಬೇಕು, ಪೆಟ್ರೋಲ್, ಡಿಸೇಲ್ ಮೇಲೆ ಕರ್ನಾಟಕ ಸರ್ಕಾರ ವಿಧಿಸಿರುವ ತೆರಿಗೆಯನ್ನು ಕೈಬಿಡಬೇಕು, ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರಿಗೆ ನೀಡುವಂತೆ ಆಟೋ ಚಾಲಕರಿಗೆ ಕಾರ್ಮಿಕ ಕಾರ್ಡ್ ನೀಡಿ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.
ಆಟೋ ಚಾಲಕರಿಗೆ ನಿಗಮ ಮಂಡಳಿ ರಚನೆ ಮಾಡಬೇಕು, ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಸರ್ಕಾರವು ಉಚಿತವಾಗಿ ಶಿಕ್ಷಣ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಪ್ರತಿಭಟನಾಕಾರರು ಹುಬ್ಬಳ್ಳಿ ಚೆನ್ನಮ್ಮ ವೃತ್ತದಿಂದ ತಹಶಿಲ್ದಾರ ಕಛೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.
ಸಂಘದ ಅಧ್ಯಕ್ಷ ಶೇಖರಯ್ಯಾ ಮಠಪತಿ, ರಫೀಕ್ ಕುಂದಗೋಳ, ಮಹಾವೀರ ಬಿಲಾನ, ಮಲ್ಲಿಕಾರ್ಜುನ ನಂದಿಹಾಳ, ಮುರಳಿ ಇಂಗಳಹಳ್ಳಿ, ಮಹೇಶ್ ದೊಡ್ಡಮನಿ ಸೇರಿದಂತೆ ಆಟೋರಿಕ್ಷಾಗಳ ಚಾಲಕರು ಹಾಗೂ ಮಾಲೀಕರು ಉಪಸ್ಥಿತರಿದ್ದರು.