ಮೈಸೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು, ಜೂ.18:- ಮುಸಲ್ಮಾನರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನದ ಸಂಕೇತ ಬಕ್ರೀದ್ ಹಬ್ಬವನ್ನು ನಗರದಲ್ಲಿ ಸೋಮವಾರ ಮುಸಲ್ಮಾನರು ಸಂಭ್ರಮದಿಂದ ಆಚರಿಸಿದರು.
ನಗರದ ತಿಲಕ್‍ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಧಾರ್ಮಿಕ ಗುರು ಹಜರತ್ ಮೌಲಾನಾ ಮಹಮ್ಮದ್ ಉಸ್ಮಾನ್ ಷರೀಫ್ ಅವರ ನೇತೃತ್ವದಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಉದಯಗಿರಿ, ಕಲ್ಯಾಣಗಿರಿ, ರಾಜೀವ್‍ನಗರ, ಗೌಸಿಯಾನಗರ, ಮಂಡಿಮೊಹಲ್ಲಾ, ದೇವರಾಜ ಮೊಹಲ್ಲಾ, ಉಸ್ಮಾನಿಯಾ ಬ್ಲಾಕ್, ಎನ್.ಆರ್.ಮೊಹಲ್ಲಾ, ಕೆಸರೆ, ಹಳೆಕೆಸರೆ ಸೇರಿದಂತೆ ವಿವಿಧ ಬಡಾವಣೆಗಳ ಮುಸಲ್ಮಾನರು ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು, ಸರ್‍ಖಾಜಿ ವಿಶೇಷ ಸಂದೇಶ ನೀಡುತ್ತಿದ್ದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸೋಮವಾರ ಬೆಳಗ್ಗೆ ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಪ್ರಾರ್ಥನೆಯಲ್ಲಿ ತ್ಯಾಗ, ಬಲಿದಾನದ ಕುರಿತು ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತಾಗಿ ಕೆಲವು ಸಾಲುಗಳನ್ನು ಹೇಳಿದರು. ನಂತರ, ಏಕಕಾಲದಲ್ಲಿ ಪ್ರಾರ್ಥಿಸಿದ ಬಳಿಕ ಅಂತ್ಯವಾಯಿತು. ಪ್ರಾರ್ಥನೆ ಬಳಿಕ ಹಿರಿಯರು-ಕಿರಿಯರು, ಮಕ್ಕಳು ಎನ್ನದೆ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸ ಉಡುಪು ಧರಿಸಿ ಸುವಾಸನೆ ಬೀರುವ ಸುಗಂಧ ದ್ರವ್ಯ ಹಾಕಿಕೊಂಡಿದ್ದ ಯುವಕರು ಪ್ರಾರ್ಥನೆ ಮುಗಿಯುತ್ತಿದ್ದಂತೆ ಸಂಭ್ರಮಿಸಿದರಲ್ಲದೆ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಕ್ಕೂ ಮೊದಲು ಸ್ಥಳೀಯವಾಗಿರುವ ಪ್ರಾರ್ಥನಾ ಮಂದಿರಗಳಲ್ಲಿ ಮುಂಜಾನೆ ಪ್ರಾರ್ಥನೆ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ಎಂ.ಲಕ್ಷ್ಮಣ್ ಸೇರಿದಂತೆ ಹಲವರು ಮೈದಾನಕ್ಕೆ ತೆರಳಿ ಮುಸನ್ಮಾನರಿಗೆ ಹಬ್ಬದ ಶುಭಾಶಯ ಕೋರಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳವರು ಹೆಚ್ಚು ಕುರಿಗಳನ್ನು ಕತ್ತರಿಸಿ, ಮೂರು ಭಾಗವನ್ನಾಗಿ ಮಾಡಿ ಒಂದು ಭಾಗವನ್ನು ತಾವೇ ಇಟ್ಟುಕೊಂಡು, ಮತ್ತೊಂದು ಭಾಗ ನೆಂಟರು, ಸಂಬಂಧಿಕರಿಗೆ ಕೊಟ್ಟು ಮತ್ತೊಂದು ಭಾಗವನ್ನು ಬಡವರಿಗೆ ದಾನ ನೀಡಿದರು. ಇನ್ನೂ ಕೆಲವರು ಅತಿ ಹೆಚ್ಚು ಬಡವರು ಇರುವ ಕಡೆಗಳಿಗೆ ತೆರಳಿ ದಾನ ಮಾಡಿ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಬಿಗಿ ಪೆÇಲೀಸ್ ಬಂದೋಬಸ್ತ್: ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆ ಹಿನ್ನೆಲೆ ಈದ್ಗಾ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಇದಲ್ಲದೆ, ಸೂಕ್ಷ್ಮ ಪ್ರದೇಶಗಳಾದ ಮಂಡಿಮೊಹಲ್ಲಾ, ತಿಲಕ್‍ನಗರ, ಉದಯಗಿರಿ, ಎನ್.ಆರ್.ಮೊಹಲ್ಲಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪೆÇಲೀಸರನ್ನು ನಿಯೋಜಿಸುವ ಮೂಲಕ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈದ್ಗಾ ಮೈದಾನದ ಬಳಿ ಎಸಿಪಿಗಳು, ಇನ್ಸ್‍ಪೆಕ್ಟರ್‍ಗಳು, ಸಬ್ ಇನ್ಸ್‍ಪೆಕ್ಟರ್‍ಗಳನ್ನು ನಿಯೋಜಿಸಲಾಗಿತ್ತು.
ಖರೀದಿ ಜೋರು
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮಂಡಿ ಮೊಹಲ್ಲಾದ ಸಾಡೇ ರಸ್ತೆ, ಮೀನಾ ಬಜಾರ್‍ಗಳಲ್ಲಿ ಖರೀದಿಯ ಭರಾಟೆ ಜೋರಾಗಿತ್ತು. ಶನಿವಾರ ಮತ್ತು ಭಾನುವಾರ ಕುಟುಂಬ ಸಮೇತ ಅಂಗಡಿಗಳಿಗೆ ತೆರಳಿ ಅಗತ್ಯ ವಸ್ತುಗಳು ಹಾಗೂ ಹೊಸ ಬಟ್ಟೆ ಖರೀದಿ ಮಾಡಿದ್ದರು. ವಿಶೇಷ ಎಂದರೇ ಸಾಡೇ ರಸ್ತೆ, ಮೀನಾ ಬಜಾರ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರದಲ್ಲಿ ಪಾಲ್ಗೊಳ್ಳುವ ಮೂಲಕ ತಮಗಿಷ್ಟವಾದ ವಸ್ತುಗಳನ್ನು ಖರೀದಿ ಮಾಡಿದರು. ಬಟ್ಟೆ ಅಂಗಡಿಗಳು ಮುಸಲ್ಮಾನರಿಂದಲೇ ತುಂಬಿದ್ದವು.