ಮಹಿಳಾ ಮೋರ್ಚಾ ಸಂಘಟನೆಯ ಶಕ್ತಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.18:- ಯಾವುದೇ ಒಂದು ಪಕ್ಷದ ಸಂಘಟನೆ ಬಲಿಷ್ಠವಾಗಿರಲು ಮಹಿಳಾ ಮೋರ್ಚಾ ಗಟ್ಟಿಯಾಗಿರಬೇಕಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆದ್ದು ನಿಮ್ಮ ಪ್ರತಿನಿಧಿಯಾಗುವ ಸೌಭಾಗ್ಯ ಸಿಕ್ಕಿದ್ದು, ನಿಮ್ಮೆಲ್ಲರ ಪರವಾಗಿ ನಾನು ಈ ಸನ್ಮಾನ ಸ್ವೀಕರಿಸಿದ್ದೇನೆ. ನಾನು ಈಗಾಗಲೇ ತಿಳಿಸಿದಂತೆ ಚುನಾವಣೆಯ ಗೆಲುವು ಚಾಮುಂಡೇಶ್ವರಿ, ಕಾವೇರಮ್ಮ, ಅಯೋಧ್ಯೆಯ ಬಾಲರಾಮ ಹಾಗೂ ಪಕ್ಷದ ಕಾರ್ಯಕರ್ತರ ಗೆಲುವುವಾಗಿದ್ದು, ನಿಮ್ಮೆಲ್ಲರ ವಿಶ್ವಾಸದೊಂದಿಗೆ ನಾನು ಕೆಲಸ ಮಾಡುತ್ತೇನೆ ಎಂದರು.
ಲೋಕಸಭಾ ಚುನಾವಣೆ ಮೂಲಕವೇ ನನ್ನ ರಾಜಕೀಯ ಅನುಭವ ಆರಂಭವಾಗಿದೆ. ಯಾವುದೇ ಒಂದು ಪಕ್ಷದ ಸಂಘಟನೆ ಬಲಿಷ್ಠವಾಗಿರಲು ಮಹಿಳಾ ಮೋರ್ಚಾ ಅತ್ಯಂತ ಗಟ್ಟಿಯಾಗಿ ಇರಬೇಕು. ಈ ನಿಟ್ಟಿನಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಮುಖ ಪಾತ್ರವಹಿಸಿ, ಚುನಾವಣೆಗೆ ಶ್ರಮಿಸಿದ್ದಾರೆ. ಮಹಿಳಾ ಮೋರ್ಚಾ ಸಂಘಟನೆ ಇನ್ನಷ್ಟು ದೊಡ್ಡಮಟ್ಟಕ್ಕೆ ಬೆಳೆಯಬೇಕಿದ್ದು, ಇದಕ್ಕೆ ನಾನು ಕೈಜೋಡಿಸುತ್ತೇನೆ ಎಂದು ಹೇಳಿದರು.
ಮೈಸೂರಿನಲ್ಲಿ ಮಹಿಳಾ ಶಕ್ತಿ: ಮೈಸೂರು ಮಹಿಳಾ ಶಕ್ತಿಗೆ ಸಾಕ್ಷಿಯಾಗಿದ್ದು, ಇದಕ್ಕೆ 200 ವರ್ಷಗಳ ಇತಿಹಾಸವಿದೆ. ಮೈಸೂರು ಸಂಸ್ಥಾನದ ಮಹಾರಾಣಿಯರಾದ ಲಕ್ಷ್ಮಮ್ಮಣಿ, ದೊಡ್ಡಮ್ಮಣ್ಣಿ, ಲಿಂಗರಾಜಮ್ಮಣ್ಣಿ, ವಾಣಿ ವಿಲಾಸ ಸನ್ನಿದಾನ ಸೇರಿದಂತೆ ಹಲವರು ನಾಯಕತ್ವದ ಗುಣವನ್ನು ಹೊಂದಿದ್ದರು. ಇವರೆಲ್ಲರೂ ಅಂದಿನ ಕಾಲದಲ್ಲೇ ಆರೋಗ್ಯ, ಸಮಾಜಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜದ ಉನ್ನತಿಗಾಗಿ ದೊಡ್ಡ ಪಾತ್ರವಹಿಸಿದ್ದರು. ಅಂದಿನ ಕಾಲದಲ್ಲಿದ್ದ ಮಹಿಳಾ ನಾಯಕತ್ವ ಇಂದಿಗೂ ಮುಂದುವರಿದಿದ್ದು, ಮೈಸೂರಿನಲ್ಲಿ ಮಹಿಳೆಯರ ಪಾತ್ರ ದೊಡ್ಡ ಮಟ್ಟದಲ್ಲಿದೆ. ಮೈಸೂರಿನ ಮಹಿಳೆಯರ ನಾಯಕತ್ವದ ಗುಣವನ್ನು ಕಾಣಲಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ, ಪಕ್ಷದ ಸಂಘಟನೆ ಬಲಿಷ್ಠಗೊಳಿಸೋಣ ಎಂದರು.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಹಿಳಾ ಮೋರ್ಚಾದಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.
ಸರ್ಕಾರದಿಂದ ಜನವಿರೋಧಿ ನಿರ್ಧಾರ
ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಪೆಟ್ರೋಲ್, ಡೀಸಲ್ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಕಷ್ಟವಾಗಲಿದ್ದು, ಸಾರ್ವಜನಿಕರ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಪ್ರತಿಭಟನೆಯಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಸರ್ಕಾರದ ಈ ನಿರ್ಧಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಏರಿಕೆ ಖಂಡಿಸಿ, ರಾಜ್ಯಾದÀ್ಯಂತ ಪ್ರತಿಭಟನೆ ನಡೆಸಲಾಗಿದೆ. ಸಿಎಂ ಹಾಗೂ ಡಿಸಿಎಂ ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ ಪ್ರತಿಭಟನೆಯಂತೆ ನಾವು ಸಹ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. ಬೆಲೆ ಏರಿಕೆಯಿಂದಾಗಿ ರಾಜ್ಯ ಸರ್ಕಾರ ಜನತೆಯ ಮುಂದೆ ತಲೆತಗ್ಗಿಸುವಂತಹ ಕೆಲಸವನ್ನು ಮಾಡಿದ್ದು, ಇದರಿಂದಾಗಿ ಆಹಾರ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಗಳು ಏರಿಕೆಯಾಗಲಿದೆ. ಇದಕ್ಕೆಲ್ಲವೂ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಟೀಕಿಸಿದರು.
ಸೇಡು ತೀರಿಸಿಕೊಳ್ಳುತ್ತಿದೆ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್‍ಗೆ ಮತ ಹಾಕದ ಕಾರಣಕ್ಕೆ ಪೆಟ್ರೋಲ್ ಹಾಗೂ ಡೀಸಲ್ ಬೆಲೆಯನ್ನು ಹೆಚ್ಚಿಸಿ ಸೇಡು ತೀರಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಅಲ್ಲದೇ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದಂತಾಗಿದ್ದು, ಇದಕ್ಕಾಗಿ ಜನರ ತೆರಿಗೆ ಹಣವನ್ನು ಬಳಸಿಕೊಂಡು, ಜನರ ಮೇಲೆ ಗಧಾ ಪ್ರಹಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಇಂದು ಬಿಜೆಪಿ ಪ್ರತಿಭಟನೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದು ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದು, ಪ್ರತಿಭಟನೆಯಲ್ಲಿ ಸಂಸದ ಯದುವೀರ್ ಒಡೆಯರ್, ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ನಗರಾಧ್ಯಕ್ಷ ಎಲ್. ನಾಗೇಂದ್ರ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮಾಜಿ ಉಪಮೇಯರ್ ಡಾ.ರೂಪ, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕಾರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.