ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಮಂಡ್ಯ: ಜೂ.18:- ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೆಸಿ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು,ಬೈಕ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೀತಿ ಅಣಕು ಪ್ರದರ್ಶನ ಹಾಗೂ ಮರಕ್ಕೆ ನೇಣು ಹಾಕೊಳ್ಳುತ್ತಿರುವ ರೀತಿ ಅಣಕು ಪ್ರದರ್ಶಿಸಿ ವಿನೂತನ ಪ್ರತಿಭಟನೆ ನಡೆಸಿ ಗಮನಸೆಳೆದರು.
ಅಲ್ಲದೇ ತೆಂಗಿನ ಕಾಯಿ ಚಿಪ್ಪು ಹಿಡಿದು ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೇ ಕಿವಿಗೆ ಹೂ ಇಟ್ಟು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್, ಡಿಸೇಲ್ ಸೆಸ್ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದರು.
ಬೈಕ್, ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದಂತೆ ಅಣಕು ಪ್ರದರ್ಶನ ಮಾಡಿ, ಕತ್ತರಿ ಹಿಡಿದು ಕಾಂಗ್ರೆಸ್ ವಿರುದ್ದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ
ಫಿಕ್ ಪ್ಯಾಕೇಟ್ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ,ಚೊಂಬು ಸಿದ್ದರಾಮಯ್ಯ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬಿತ್ಯಾದಿ ರಾಜ್ಯ ಸರ್ಕಾರದ ವಿರುದ್ದ ಹಲವು ಪ್ಲೇ ಕಾರ್ಡ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಜತೆಗೆ ಇದೇ ವೇಳೆ ಹಳೆ ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಜೆಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು,ಕೂಡಲೇ ಪೆಟ್ರೋಲ್, ಡೀಸೇಲ್ ಮೇಲಿನ ಸೆಸ್ ದರವನ್ನು ಇಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಮಾತನಾಡಿ ಪೆಟ್ರೋಲ್ ಬೆಲೆ ಲೀಟರ್‍ಗೆ 3 ರೂ, ಡೀಸೆಲ್ ಬೆಲೆ 3.5 ರೂ. ಹೆಚ್ಚಳದ ಅವಿವೇಕದ ಮತ್ತು ಜನವಿರೋಧಿ ನಿರ್ಧಾರವನ್ನು ಕಾಂಗ್ರೆಸ್ ಸರಕಾರ ಕೈಗೊಂಡಿದೆ. ಏರಿಸಿದ ದರ ಹಿಂಪಡೆಯುವವರೆಗೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ಡಾ. ಸಿದ್ದರಾಮಯ್ಯ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ವಿದ್ಯಾ ನಾಗೇಂದ್ರ, ರೂಪಾ, ಮಳವಳ್ಳಿ ಅಶೋಕ್,ಕೆ.ಎಲ್. ಆನಂದ್, ಅರವಿಂದ್, ಪಿ.ಹಳ್ಳಿರಮೇಶ್, ರಾ.ಸಿ.ಸಿದ್ದರಾಜು, ವಿವೇಕ್, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕನ್ನಂಬಾಡಿ ಸುರೇಶ್,ಕೆ.ನಾಗನಂದ, ಇತರರು ಭಾಗವಹಿಸಿದ್ದರು.