ಇಎಸ್‌ಐ ಆಸ್ಪತ್ರೆ ಮಂಜೂರಾತಿಗೆ ಸಚಿವ ಹೆಚ್‌ಡಿಕೆಗೆ ಮನವಿ
ಕೋಲಾರ,ಜೂ,೧೮- ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ವಿಧಾನಪರಿಷತ್ ಮಾಜಿ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಭೇಟಿ ಮಾಡಿ ಅಭಿನಂದಿಸಿ, ಕೋಲಾರ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸಲು ಕ್ರಮವಹಿಸಲು ಮನವಿ ಮಾಡಿದರು.
ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಅವರನ್ನು ಅಭಿನಂದಿಸಿದ ಡಾ.ವೈ.ಎ.ನಾರಾಯಣಸ್ವಾಮಿ, ಕೋಲಾರ ಜಿಲ್ಲೆಯಲ್ಲಿ ನರಸಾಪುರ, ವೇಮಗಲ್, ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ತಲೆಯೆತ್ತಿವೆ, ಇಲ್ಲಿ ಸಹಸ್ರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಆರೋಗ್ಯ ರಕ್ಷಣೆಗೆ ಅಗತ್ಯವಾದ ಸೌಲಭ್ಯಗಳ ಕೊರಗೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.
ವೇಮಗಲ್‌ನಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಕುರಿತ ಪ್ರಸ್ತಾಪ ಹಿಂದಿನ ಸರ್ಕಾರದಲ್ಲೇ ಆಗಿತ್ತು, ಆದರೆ ಯಾವುದೇ ಪ್ರಯೋಜನವಾಗಿಲ್ಲ, ಇಲ್ಲಿ ಆಸ್ಪತ್ರೆಗೆ ಜಾಗವನ್ನೂ ಗುರುತಿಸಲಾಗಿದೆ, ತಮ್ಮ ಅವಧಿಯಲ್ಲಿ ಕೋಲಾರಕ್ಕೆ ಇಎಸ್‌ಐ ಆಸ್ಪತ್ರೆ ಅತಿ ಜರೂರಾಗಿ ಮಂಜೂರು ಮಾಡಲು ಮನವಿ ಮಾಡಿದರು.
ಕೋಲಾರ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಜನ ಗೆಲ್ಲಿಸಿದ್ದು, ಅವರ ಅಭಿಮಾನ ಉಳಿಸಿಕೊಳ್ಳುವ ಅಗತ್ಯವಿದೆ, ತಾವು ಕೇಂದ್ರ ಮಂತ್ರಿಯಾಗಿರುವುದು ಕೋಲಾರ ಜಿಲ್ಲೆಯ ಜನತೆಯಲ್ಲಿ ಅತ್ಯಂತ ಖುಷಿ ತರಿಸಿದೆ ನೀವು ಕೂಡಲೇ ಇಎಸ್‌ಐ ಆಸ್ಪತ್ರೆ ಮಂಜೂರುಮಾಡಿಸಿ ತಮ್ಮ ಅವಧಿಯಲ್ಲೇ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಕೋರಿದರು.
ಕೋಲಾರ ಜಿಲ್ಲೆ ಬರದಿಂದ ತತ್ತರಿಸಿದೆ, ಇಲ್ಲಿನ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವಂತಾಗಲು ಮತ್ತಷ್ಟು ಕೈಗಾರಿಕೆಗಳ ಅಗತ್ಯವಿದೆ, ಜತೆಗೆ ಸ್ಥಳೀಯರಿಗೆ ಉದ್ಯೋಗ ಮೀಸಲಿಡುವ ಕಟ್ಟುನಿಟ್ಟಿನ ನಿರ್ದೇಶನವೂ ತಮ್ಮಿಂದ ಆಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹಲವು ಮುಖಂಡರು ಹಾಜರಿದ್ದರು.