ನೀತಿಗೆರೆ ಗ್ರಾಮದಲ್ಲಿ ರಾಜ್ಯ ರೈತ ಸಂಘ – ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.೧೮; ಚನ್ನಗಿರಿ‌ ತಾಲ್ಲೂಕಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಉತ್ತಮ ಸಂಘಟನೆಯಾಗಿ ಬೆಳೆಯುತ್ತಿರುವುದು ಅದ್ಭುತ ಬೆಳವಣಿಗೆ ಎಂದು ಕರ್ನಾಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಹೆಚ್ ಆರ್ ಬಸವರಾಜಪ್ಪ ತಿಳಿಸಿದರು.ತಾಲ್ಲೂಕಿನ ನೀತಿಗೆರೆ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಬಗರ್ ಹುಕುಂ ಜಮೀನುಗಳು ಉಳಿದಿವೆ ಎಂದರೆ ಅದಕ್ಕೆ ರೈತ ಸಂಘ ಕಾರಣ. ಕೇಂದ್ರ ಮತ್ತು ರಾಜ್ಯ ಸರಕಾರ ಗ್ರಾಮೀಣರು ಮತ್ತು ರೈತಾಪಿ ವರ್ಗದ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸುತ್ತವೆ. ಆದರೆ, ಯೋಜನೆಗಳ ಪ್ರಯೋಜನವನ್ನು ಅರ್ಹರಿಗೆ ತಲುಪಿಸುವಲ್ಲಿ ಮತ್ತು ರೈತರ ಸಮಸ್ಯೆ ಆಲಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ನೀತಿಗೇರೆ ರೈತರು ಸಂಘಟಿತರಾಗಿರುವುದು ಉತ್ತಮ ಬೆಳವಣಿಗೆ. ರಾಜ್ಯ ರೈತ ಸಂಘ 44 ವರ್ಷಗಳಿಂದ ನೂಂದ ಜನರಿಗೆ ನೆರವು ನೀಡುತ್ತಾ ಬರುತ್ತಿದೆ ಆದ್ದರಿಂದ ಹಸಿರು ಟವಾಲ್ ಪವಿತ್ರವಾದದ್ದು ಎಂದು ತಿಳಿಸಿದರು.ರೈತರ ಬಗ್ಗೆ ಯಾರಿಗೂ, ಯಾವ ಪಕ್ಷಗಳಿಗೂ ಕಾಳಜಿ ಇಲ್ಲ. ರೈತರನ್ನು ಯಾವ ಸರ್ಕಾರವೂ ಉದ್ಧಾರ ಮಾಡುವುದಿಲ್ಲ. ಸರ್ಕಾರ ಬಿತ್ತನೆ ಬೀಜ, ಗೊಬ್ಬರ, ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ವಿಫಲವಾಗಿದೆ.ವಿದ್ಯುತ್ ಶಕ್ತಿ ಖಾಸಗಿಕರಣ ಆಗುತ್ತಿರುವುದನ್ನು ತಪ್ಪಿಸಲು ಸಾಕಷ್ಟು ರೂಪುರೇಷೆ ತಯಾರಿಸಿದ್ದೇವೆ. ಬ್ಯಾಂಕ್ ನವರು, ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಹಣವು ರೈತರ  ಸಾಲಕ್ಕೆ  ಜಮೆ ಮಾಡಿಕೊಳ್ಳುತ್ತಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕಿಡಿಕಾರಿದರು.ಬರಗಾಲವಿರುವುದರಿಂದ ಬ್ಯಾಂಕಿನವರು ರೈತರ ಸಾಲ ವಸೂಲಿಗೆ ಬಲವಂತ ಮಾಡಬಾರದು ಮತ್ತು ರೈತರ ಖಾತೆಗೆ ಬರುವ ಪರಿಹಾರದ ಹಣ, ವೃದ್ದಪ್ಯಾ ವೇತನ, ಹಾಲಿನ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಸರ್ಕಾರ‌ ಆದೇಶ ಹೊರಡಿಸಬೇಕು,ರೈತರೇ ಸ್ವಯಂ ವೆಚ್ಚ ಯೋಜನೆಯಡಿ IP ಸೆಟ್ ಗಳನ್ನು ಹಾಕಿಸಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು, ಅಕ್ರಮ-ಸಕ್ರಮ ಕಾರ್ಯಗಳನ್ನು ತುರ್ತು ಮಾಡಬೇಕು, ರಾಜ್ಯ ಸರ್ಕಾರ ಕೃಷಿಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು,ಬಿತ್ತನೆ ಬೀಜ ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದು ಕಡಿಮೆ ಮಾಡಬೇಕು, ಕಾಳ ಸಂತೆಯಲ್ಲಿ ಮಾರಾಟಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.ರಾಜ್ಯ ಕಾರ್ಯಧ್ಯಕ್ಷರಾದ ಹೊನ್ನೂರು ಮುನಿಯಪ್ಪ ಮಾತನಾಡಿ, ಕಷ್ಟದಲ್ಲಿ ನೊಂದವರ ಧ್ವನಿ ಕೇಳಿಸಿ ಅವರ ಕಷ್ಟವನ್ನ ತೀರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘಟನೆಯಾಗಿದೆ. ಒಗ್ಗಟ್ಟಾಗಿ ಇದ್ದರೆ ನಮ್ಮ ಸಮಸ್ಯೆಗಳನ್ನ ನಮ್ಮ ಸಂಘಟನೆಯ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ತಾಲೂಕು ಅಧ್ಯಕ್ಷ ಮಲಹಾಳ್ ತಿಪ್ಪೇಶಪ್ಪ ಮಾತನಾಡಿ, ರೈತರು ಗುಲಾಮರಲ್ಲ ಎರಡು ವರ್ಷ ಬರಗಾಲ ಇದ್ದ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಿಡಿಗಾಸು ಅನುದಾನ ನೀಡಲಿಲ್ಲ. ಸರ್ಕಾರ ಎಲ್ಲವನ್ನು ಖಾಸಗಿಕರಣ ಮಾಡುತ್ತಿದ್ದರೆ ರೈತರ ಗತಿ ಏನು! ರೈತರ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಅಗತ್ಯ ಎಂದರು.ತಾಲೂಕು ಹಸಿರು ಸೇನೆಯ ಅಧ್ಯಕ್ಷ ರವಿ ಹಳ್ಳಿ,  ನೀತಿಗೆರೆ ಗ್ರಾಮ ಘಟಕದ ಅಧ್ಯಕ್ಷ ಎಂ.ವಿ ಮಂಜಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ ರವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀದೇವಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ನಾಯ್ಕ್ ಕಬ್ಬಳ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಭಿಲಾಷ ಎಂ, ಸಂತೋಷ್, ನೀತಿಗೆರೆ ಗ್ರಾಮ ಘಟಕದ ಪದಾಧಿಕಾರಿಗಳಾದ ಎಂ ಸಿದ್ದರಾಮಪ್ಪ, ಎಂ.ಎನ್ ಮಂಜಪ್ಪ, ಎಸ್.ಬಿ ಪ್ರಕಾಶ್, ಎಂ.ವಿ ಚಂದ್ರಪ್ಪ, ಎಂ.ಎಸ್ ಪರಮೇಶ್ವರಯ್ಯ, ಎಂ.ವಿ ಹಾಲೇಶಪ್ಪ, ಎಮ್.ಸಿ ಲಿಂಗೇಶ್, ಸಿದ್ದಪ್ಪ, ಮಲ್ಲಿಕಾರ್ಜುನ್, ಶೇಖರಪ್ಪ, ಗೌಡ್ರು ವೀರಪ್ಪ, ಗಣೇಶಚಾರ್ಯ, ಯೋಗೇಶ್ ಸೇರಿದಂತೆ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ರೈತ ಬಾಂಧವರು ಉಪಸ್ಥಿತರಿದ್ದರು.