ಬಂಜರು ಭೂಮಿ ಅಭಿವೃದ್ಧಿಪಡಿಸುವುದು ಅಗತ್ಯ
ಕಲಬುರಗಿ:ಜೂ.17: ಅತಿಯಾದ ಅಂತರ್ಜಲದ ಬಳಕೆ, ನೀರಿನ ವ್ಯರ್ಥ, ಅರಣ್ಯ ನಾಶ, ಗಣಿಗಾರಿಕೆ, ಮಣ್ಣಿನ ಸವಕಳಿಯಂತಹ ಮುಂತಾದ ಕಾರಣಗಳಿಂದ ಬಂಜರು ಭೂಮಿಯ ಪ್ರಮಾಣ ಹೆಚ್ಚಾಗಿದೆ. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಫಲವತ್ತಾದ ಭೂಮಿಯನ್ನಾಗಿಸುವುದು ಅಗತ್ಯವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಅಂತಾರಾಷ್ಟ್ರೀಯ ಬಂಜರು ಮತ್ತು ಮರಭೂಮಿ ತಡೆ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಮಣ್ಣು ಬಹು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿದ್ದು ಅದನ್ನು ರಕ್ಷಿಸಬೇಕು. ಸಾವಯುವ ಗೊಬ್ಬರದ ಬಳಕೆ ಮಾಡುವುದು, ಎಲ್ಲೆಡೆ ಅರಣ್ಯಗಳನ್ನು ಬೆಳೆಸಬೇಕಾಗಿದೆ. ಸುಸ್ಥಿರ ಅಭಿವೃದ್ಧಿಗೆ ಬರಗಾಲವು ತೊಡಕಾಗಿದ್ದು, ಅದನ್ನು ಅಭಿವೃದ್ಧಿಪಡಿಸುವ ವೇಗ ಹೆಚ್ಚಳವಾಗಬೇಕಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಾಗಬೇಕು. ಶೇ.37ರಷ್ಟು ಬಂಜರು ಭೂಮಿಯಿದೆ. 2050ರ ವೇಳೆಗೆ ದೇಶ ಆಹಾರ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಬೇಕಾದರೆ ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿಸುವುದು ಅತ್ಯವಶ್ಯಕವಾಗಿದೆ. ಉತ್ತಮ ಜಲಾನಯನ ನಿರ್ವಹಣೆ ಇದಕ್ಕೆ ಪೂರಕವಾದ ಅಂಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ವಿಶ್ವನಾಥ, ತಿರುಮಲೇಶ್, ಶಾಮ್ಯುವೇಲ್, ಈರಣ್ಣ, ವಾಸುದೇವ, ಮೌನೇಶ ಸೇರಿದಂತೆ ಇನ್ನಿತರರು ಇದ್ದರು.