ಪತ್ರಿಕಾ ದಿನಾಚರಣೆಯ ಪ್ರಯುಕ್ತ ಕಾನಿಪ ವಿಜಯನಗರದಿಂದ ಕ್ರಿಕೆಟ್ ಆಯೋಜನೆ “ಎಲೆವೆನ್ ವಿರುದ್ಧ ಲೆವೆನ್”ಗೆ ಭರ್ಜರಿ ಜಯ
ಸಂಜೆವಾಣಿ ವಾರ್ತೆ
ವಿಜಯನಗರ: ಪತ್ರಿಕಾ ದಿನಾಚರಣೆ ನಿಮಿತ್ತ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೊಸಪೇಟೆಯ ಭಟ್ರಳ್ಳಿ ಆಂಜನೇಯ ದೇವಸ್ಥಾನ  ಮೈದಾನಲ್ಲಿ ಭಾನುವಾರ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪತ್ರಕರ್ತರಿಗಾಗಿ ಆಯೋಜಿಸಿದ್ದ ಸೌಹಾರ್ದಯುತ ಕ್ರಿಕಟ್ ಪಂದ್ಯದಲ್ಲಿ ವಿಜಯನಗರ ಎಲೆವೆನ್ ವಿರುದ್ಧ ಹಂಪಿ ಎಲೆವೆನ್ ತಂಡ 8 ವಿಕೇಟ್‍ಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಹಂಪಿ ಎಲೆವೆನ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ವಿಜಯನಗರ ಎಲೆವೆನ್ ತಂಡ 15 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 103 ರನ್ ಪೇರಿಸಿತು. ತಂಡದ ನಾಯಕ ಜಯಪ್ಪ ರಾಥೋಡ್ ವೈಯಕ್ತಿಕವಾಗಿ 59 ರನ್ ಗಳಿಸಿದರು. ತಂಡದ ಪರವಾಗಿ ಕಿಚಿಡಿ ಕೊಟ್ರೇಶ್, ಸುರೇಶ ಚವ್ಹಾಣ್, ಸಂಜಯ ಕುಮಾರ್, ವೀರೇಶ್, ಪ್ರಕಾಶ, ಮತ್ತಿತರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ನಂತರ ಗುರಿಯ ಬೆನ್ನಟ್ಟಿದ ಹಂಪಿ ಎಲೆವೆನ್ ತಂಡ 15 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 104 ರನ್ ಗಳಿಸಿ, ಗೆಲುವಿನ ನಗೆ ಬೀರಿತು.  ಅನೂಪ್ ಕುಮಾರ್ 51 ರನ್‍ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.  ತಂಡದ ನಾಯಕ ವಿಜಯ ಕುಮಾರ್, ಶಂಕರ್‍ದಾಸ್, ಅಂಬರೀಶ್ ವಾಲ್ಮೀಕಿ, ಲವಾ ಕೆ. ವೀರೇಂದ್ರ ನಾಗಲದಿನ್ನಿ ಇನ್ನಿತರರು ಬ್ಯಾಟ್ ಬೀಸಿ ತಂಡದ ಗೆಲುವಿಗೆ ಜೊತೆಯಾದರು. ಅನಂತಪದ್ಮನಾಭ ರಾವ್ ಮತ್ತು ಆನಂದ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಗಮನ ಸೆಳೆದ ಎಸ್ಪಿ, ಡಿಸಿ ಬ್ಯಾಟಿಂಗ್, ಬೌಲಿಂಗ್:
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ತಾವು ಕೂಡಾ ಕೆಲಕಾಲ ಪತ್ರಕರ್ತರೊಂದಿಗೆ ಕ್ರಿಕೆಟ್ ಆಡಿ, ಸಂಭ್ರಮಿಸಿದರು.
ಮೊದಲಿಗೆ ಎಸ್ಪಿ ಮತ್ತು ಡಿಸಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ನಂತರ ಪರಸ್ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿ, ಕ್ರಿಕೆಟ್ ಕೌಶಲ್ಯವನ್ನು ಪ್ರದಶಿಸಿದರು.
ತಮ್ಮ ಬಿಡುವಿಲ್ಲದ ಸಮಯದಲ್ಲೂ ಎಸ್ಪಿ ಶ್ರೀಹರಿ ಬಾಬು ಅವರು ಮೊದಲಾರ್ಧದವರೆಗೂ ಪಂದ್ಯವನ್ನು ವೀಕ್ಷಿಸಿ, ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ವಿಜೇತ ಮತ್ತು ರನ್ನರ್ ಅಪ್ ತಂಡಗಳಿಗೆ ಟ್ರೋಫಿ ಕೊಡುಗೆಯಾಗಿ ನೀಡಿದರು.
ಟ್ರೋಫಿ ವಿತರಣೆ:
ಪಂದ್ಯಾಟದ ಬಳಿಕ ವಿಜೇತ ಹಂಪಿ ಎಲೆವೆನ್ ತಂಡದ ನಾಯಕ ವಿಜಯಕುಮಾರ್ ಹಾಗೂ ಸಂಗಡಿಗರಿಗೆ ಅದರಂತೆ ರನ್ನರ್ ಅಪ್ ತಂಡದ ನಾಯಕ ಜಯಪ್ಪ ರಾಥೋಡ್ ಹಾಗೂ ಸಂಗಡಿಗರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ವೆಂಕೋಬಿ ನಾಯಕ, ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಹಾಗೂ ಹಿರಿಯ ಪತ್ರಕರ್ತೆ ರೇಖಾ ಪ್ರಕಾಶ್ ಟ್ರೋಫಿ ವಿತರಿಸಿ, ಶುಭ ಕೋರಿದರು.
ಸದಾ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುವ ಪತ್ರಕರ್ತರು ಸಂಘಟಿತರಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳು ಆರೋಗ್ಯ ವೃದ್ಧಿಸುವ ಜೊತೆಗೆ ಪರಸ್ಪರರಲ್ಲಿ ಸಾಮರಸ್ಯ ಬೆಳೆಸಲಿದೆ. ಜನಮುಖಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರೂ ಸಂಘಟನೆಯಗಲು ಇಂತಹ ಚಟುವಟಿಕೆಗಳು ಅಗತ್ಯ.
– ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ.
ಕ್ರೀಡೆಗಳು ಮನುಷ್ಯನ ಮನಸ್ಸನ್ನು ಅರಳಿಸುತ್ತವೆ. ಅದರಲ್ಲೂ ಸೌಹಾರ್ದ ಪಂದ್ಯಾವಳಿಗಳು ಎಲ್ಲರಿಗೂ ಆನಂದ ನೀಡುತ್ತವೆ. ಪ್ರೀತಿ ವಿಶ್ವಾಸವನ್ನು ಮೂಡಿಸುತ್ತವೆ. ಕಷ್ಟಗಳನ್ನು ಮರೆಸುತ್ತವೆ. ಪತ್ರಕರ್ತರ ಒತ್ತಡ ನಿವಾರಣೆಗೆ ಕ್ರೀಡೆಗಳು ಅಗತ್ಯ.
– ಬಿ.ಎಲ್.ಶ್ರೀಹರಿಬಾಬು, ಎಸ್ಪಿ.