ಹಬೋಹಳ್ಳಿ :ಬಲಿಗಾಗಿ ಕಾದಿರುವ ಬೈಪಾಸ್ ರಸ್ತೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ :ಜೂ.17 ಪಟ್ಟಣದ ಹೊಸ ಊರು ಮತ್ತು ಹಳೆ ಊರು ಸಂಪರ್ಕದ ಬೈಪಾಸ್ ರಸ್ತೆ ಸಂಪೂರ್ಣ ಅದಕ್ಕೆಟ್ಟು ಹೋಗಿದ್ದು ಮಳೆ ನೀರು ನಿಂತು ರಸ್ತೆಯಲ್ಲಿರುವ  ಗುಂಡಿಗಳು ಬಲಿಗಾಗಿ ಕಾದು ಕೂತಿವೆ.
ಈ ರಸ್ತೆಯಲ್ಲಿ ದಿನಾಲು ಓಡಾಡುವ ಸಾರ್ವಜನಿಕರು ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.
 ಪಟ್ಟಣದ ಬಹು ಮುಖ್ಯವಾದ ಈ ರಸ್ತೆ ದುರಸ್ತಿ ಕಾಣದೆ ಎರಡು ವರ್ಷದಿಂದ  ಅಸ್ಥಿಪಂಜರದಂತೆ ಗೋಚರಿಸುತ್ತದೆ. ಈಗಾಗಲೇ ಸೇತುವಿಗೆ ಹಾಕಿದ್ದ ಸಿಸಿ ರಸ್ತೆ ಕಿತ್ತುಹೋಗಿ ಕಬ್ಬಿಣ ರಾಡುಗಳು ಕಾಣುತ್ತಿವೆ.  ಈ ರಸ್ತೆಯಲ್ಲಿ ಬರುವ ವಿಜ್ಞಾನ ಕಾಲೇಜಿನಲ್ಲಿ  ನೂರಾರು ವಿದ್ಯಾರ್ಥಿಗಳು  ರಸ್ತೆಯ ಮೂಲಕವೇ ಹಾದು ಹೋಗಬೇಕಾಗಿದೆ. ದೂರದ ಬೇರೆ ಬೇರೆ ಜಿಲ್ಲೆಯಿಂದ ಬಂದಿರುವ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಳಾಗಿರುವ ರಸ್ತೆಯನ್ನು ನೋಡಿ ಮೂಗು ಮುರಿಯುತ್ತಿದ್ದಾರೆ.
 ಸರ್ಕಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿಗೊಳಿಸದೆ ನಿದ್ದೆಗೆ ಜಾರಿದ್ದಾರೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆಯಲ್ಲಿ ಈಗಾಗಲೇ ನಾಲ್ಕೈದು ಜನ ಬಿದ್ದು  ಗಾಯಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರಸ್ತೆ ದುರಸ್ತಿಗೊಳ್ಳದೆ ಇದ್ದರೆ   ಯಾರಾದರೂ ಬಲಿಯಾಗುವುದು ಗ್ಯಾರಂಟಿ.  ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.