ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಅಧಿಕಾರಿಗಳ ಸಭೆ
ಧಾರವಾಡ,ಜೂ17: ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜೂನ್ 18, 2024 ರಂದು ಏಕಕಾಲಕ್ಕೆ ಡೆಂಗ್ಯೂ ನಿಯಂತ್ರಣ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದಂತೆ ಆರೋಗ್ಯ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ, ಜಿಲ್ಲಾ ನಗರಾಭಿವೃದ್ಧಿಕೋಶ, ಪಿಯು ಮತ್ತು ಪದವಿ ಕಾಲೇಜು ವಿಭಾಗದ ಅಧಿಕಾರಿಗಳು ಡಿಸಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ದತಾ ಸಭೆ ಜರುಗಿಸಿದರು.
ಝೂಮ್ ವಿಸಿ ಮುಖಾಂತರ ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಝೂಮ್ ವಿಸಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ವಿಜ್ಞಾನ ಶಿಕ್ಷಕರಿಗೆ ಡೆಂಗ್ಯೂ ನಿಯಂತ್ರಣ ಕ್ರಮಗಳ ಕುರಿತು ವಿವರಿಸಲಾಯಿತು. ಮತ್ತು ಭಿತ್ತಿ ಪತ್ರ ಹಾಗೂ ವೀಡಿಯೊಗಳನ್ನು ಮಕ್ಕಳಿಗೆ ತೋರಿಸಲು ತಿಳಿಸಲಾಯಿತು.
ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು, ಇದರ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಲು ಹಾಗೂ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಲು ಡಾ.ಶಶಿ ಪಾಟೀಲ್ ಅವರು ಎಲ್ಲಾ ಇಲಾಖೆಗಳ ಸಹಕಾರ ಕೋರಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ., ಅವರು ಮಾತನಾಡಿ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶ್ವಸಿಗೂಳಿಸಲು ತಿಳಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ ಅವರು ಮಾತನಾಡಿ, ಪಂಚಾಯತ ಅಧಿಕಾರಿಗಳು ಗ್ರಾಮ ಪಂಚಾಯತವಾರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಎಲ್ಲಾ ಶಾಲೆಗಳಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಅರಿವು ಮೂಡಿಸುವ ಮೂಲಕ ಕಾರ್ಯಕ್ರಮವನ್ನು ಯಶ್ವಸಿಗೂಳಿಸಲು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇಶಕ ಎಸ್.ಎಸ್. ಕೆಳದಿಮಠ ಅವರು ಮಾತನಾಡಿ, ಆರೋಗ್ಯ ಇಲಾಖೆ ನೀಡಿದ ಮಾಹಿತಿಯನ್ನು, ಮಕ್ಕಳಿಗೆ ತಿಳಿಸಿ ಮಕ್ಕಳಲ್ಲಿ ಅರಿವು ಮೂಡಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಲು ಮತ್ತು ನಿಯಂತ್ರಣ ಕ್ರಮವನ್ನು ತಮ್ಮ ತಮ್ಮ ಮನೆಗಳಲ್ಲಿಯೂ ಅಳವಡಿಸಿಕೂಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಲು ಸೂಚಿಸಿದರು.
