ಸದೃಢ ಆರೋಗ್ಯಕ್ಕಾಗಿ ಸಾವಯುವ ತರಕಾರಿ, ಹಣ್ಣುಗಳ ಸೇವನೆ ಅಗತ್ಯ
ಕಲಬುರಗಿ:ಜೂ.17: ವ್ಯಕ್ತಿ ದೈಹಿಕ, ಮಾನಸಿಕವಾಗಿ ಆರೋಗ್ಯಕರವಾಗಿರಬೇಕಾದರೆ, ಆಹಾರವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಶುದ್ಧ, ಸ್ವಚ್ಛವಾಗಿರುವ ತರಕಾರಿ, ಹಣ್ಣುಗಳು, ಧಾನ್ಯಗಳು ಸೇರಿದಂತೆ ಸಾವಯುವ ತರಕಾರಿಗಳನ್ನು ಸೇವಿಸುವದರಿಂದ ವ್ಯಕ್ತಿಗೆ ಬೇಕಾದ ಪ್ರೋಟಿನ್ಸ್, ಖನಿಜಗಳು, ಜೀವಸತ್ವಗಳು ದೊರೆಯುವ ಮೂಲಕ ದೈಹಿಕ, ಮಾನಸಿಕವಾಗಿ ಆರೋಗ್ಯಯುತವಾಗಿರಲು ಸಾಧ್ಯವಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸ್ವಾಮಿ ವಿವೇಕಾನಂದ ನಗರದಲ್ಲಿರುವ ‘ಶರಣಬಸವೇಶ್ವರ ಸಾವಯುವ ತರಕಾರಿ ಮತ್ತು ಹಣ್ಣುಗಳ ಅಂಗಡಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ವಿಶ್ವ ತರಕಾರಿ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಅಂಗಡಿಯ ಮುಖ್ಯಸ್ಥ ಸಿದ್ದರಾಮ ತಳವಾರ ಮಾತನಾಡಿ, ಬಹುತೇಕ ತರಕಾರಿಯು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿ ಹಾಗೂ ಹೆಚ್ಚಿನ ಪೋಷಕಾಂಶಗಳು ಹೊಂದಿವೆ. ಧಾನ್ಯಗಳು, ಕಾಯಿಪಲ್ಲೆ, ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಸಮತೋಲಿತವಾದ ಆಹಾರವು ದೊರೆಯುತ್ತದೆ. ತೂಕ ನಿರ್ವಹಣೆಯಾಗಿ, ದೇಹವು ರೋಗಮುಕ್ತವಾಗಿರಲು ಸಾಧ್ಯವಾಗುತ್ತದೆ. ಸಾವಯುವ ತರಕಾರಿ, ಹಣ್ಣುಗಳನ್ನು ಬಳಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಮಲ್ಲಿಕಾರ್ಜುನ ಹಾಲೊಳ್ಳಿ ಸೇರಿದಂತೆ ಇನ್ನಿತರರಿದ್ದರು.