ನರೋಣಾ ಗ್ರಾಮದ ಹದಗೆಟ್ಟ ರಸ್ತೆ: ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸುವಂತೆ ಡಿಎಸ್‍ಎಸ್ ಒತ್ತಾಯ
ಆಳಂದ: ಸೆ.25:ತಾಲೂಕಿನ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನರೋಣಾ ಗ್ರಾಮ ಸರ್ಕಲ್ ಆಗಿದ್ದು, ಪ್ರತಿ ದಿನ ಸುತ್ತಮುತ್ತಲಿನ ಗ್ರಾಮಗಳಿಂದ ಹತ್ತಾರು ಹಳ್ಳಿಗಳಿಂದ ಹಾಗೂ ಬಸವಕಲ್ಯಾಣ ಮತ್ತು ಕಲಬುರಗಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ನೂರಾರು ವಾಹನಗಳು ಈ ರಸ್ತೆ ಪ್ರಯಾಣಿಸುತ್ತವೆ. ಆದರೆ ಇಲ್ಲಿನ ಈ ಪ್ರಮುಖ ರಸ್ತೆ, ವಿಶೇಷವಾಗಿ ಸಂಗೊಳಗಿ ಕ್ರಾಸ್ ಮೂಲಕ ನರೋಣಾ ಗ್ರಾಮಕ್ಕೆ ತಲುಪುವ ರಸ್ತೆ ತೀರಾ ಹದಗೆಟ್ಟ ಸ್ಥಿತಿಯಲ್ಲಿ ಇದೆ ಎಂದು ವಲಯದ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಪ್ರಯಾಣಿಕರು ಮತ್ತು ಹಲವು ಗ್ರಾಮಗಳ ನಿವಾಸಿಗಳು ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಳೆಯ ನಡುವೆ, ಈ ರಸ್ತೆ ನೀರಿನಿಂದ ತುಂಬಿ ಕೆರೆಯಂತೆ ಕಾಣುತ್ತಿದೆ, ಮತ್ತು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಹ ಈ ರಸ್ತೆಯಲ್ಲಿ ಅವಘಡಕ್ಕೆ ಒಳಗಾಗುತ್ತಿರುವ ಅನುಭವ ಪ್ರತಿದಿನವೂ ನಡೆಯುತ್ತಿವೆ ಎಂದು ಹೇಳಿದ್ದಾರೆ.
ನರೋಣಾ ಗ್ರಾಮವು ಪ್ರಾಥಮಿಕ ಅಗತ್ಯ ಸೇವೆಗಳ ಕೇಂದ್ರವಾಗಿದೆ, ಶಿಕ್ಷಣ ಇಲಾಖೆ, ಪೊಲೀಸ್ ಠಾಣೆ, ಕೃಷಿ ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಮತ್ತು ಆರೋಗ್ಯ ಇಲಾಖೆಯಂತಹ ಹಲವು ಸರ್ಕಾರಿ ಇಲಾಖೆಗಳೊಂದಿಗೆ ಸುಮಾರು ಹತ್ತು ಸಾವಿರ ಜನಸಂಖ್ಯೆ ಹೊಂದಿದೆ. ಆದ್ದರಿಂದ, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು, ಮತ್ತು ಗ್ರಾಮಸ್ಥರು ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸಲು ಮುಂದಾದರೆ ಹಾಳುಬಿದ್ದ ರಸ್ತೆಯಲ್ಲಿ ಸಂಚಾರ ದುಸ್ಥರವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹದಗೆಟ್ಟ ರಸ್ತೆಯು ಜನರ ದಿನನಿತ್ಯದ ದುರಂತಗಳ ಸಂಭವವನ್ನು ಹೆಚ್ಚಿಸಿದೆ. ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿ ಮೂಡ್ ಅವರಿಗೆ ಮನವಿ ಸಲ್ಲಿಸಿದ್ದು, ರಸ್ತೆಯ ತುರ್ತು ದುರಸ್ತಿಗೆ ಕ್ರಮಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕ ಶಿವಪುತ್ರ ಬಿ. ರಾಗಿ ಒತ್ತಾಯಿಸಿದ್ದಾರೆ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಆದಷ್ಟು ಬೇಗ ಈ ರಸ್ತೆಯ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ರಸ್ತೆ ನಿರ್ಮಾಣದ ವಿಳಂಬದಿಂದ ಜೀವ ಹಾನಿಯಾದರೆ, ಸಂಬಂಧಿಸಿದ ಅಧಿಕಾರಿಗಳು ಮತ್ತು ಶಾಸಕರು ಹೊಣೆ ಹೊತ್ತಾಗಬೇಕೆಂದು ಅವರು ಎಚ್ಚರಿಸಿದ್ದಾರೆ.